ಮಂಡ್ಯ, ಅ.29 (DaijiworldNews/PY): ಕಳ್ಳರಿಗೆ ಹೆದರಿ ವೃದ್ಧೆಯೋರ್ವರು ಚಿನ್ನಾಭರಣವನ್ನು ರಾಗಿ ಮೂಟೆಯಲ್ಲಿ ಅಡಗಿಸಿಟ್ಟಿದ್ದರು. ಆದರೆ, ವಿಚಾರ ತಿಳಿಯದೇ ಪತಿ ರಾಗಿ ಮೂಟೆ ಮಾರಾಟ ಮಾಡಿದ್ದು, ರಾಗಿ ಮೂಟೆ ಖರೀದಿಸಿದ್ದ ರೈಸ್ ಮಿಲ್ ಮಾಲೀಕರು ಮೂಟೆಯಲ್ಲಿ ಸಿಕ್ಕ ಚಿನ್ನಾಭರಣವನ್ನು ವಾರಸುದಾರರಿಗೆ ಹಿಂತಿರುಗಿಸಿದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕಲ್ಲಿನಾಥಪುರ ಗ್ರಾಮದಲ್ಲಿ ನಡೆದಿದೆ.
ಕಲ್ಲಿನಾಥಪುರ ಗ್ರಾಮದ ಕಲ್ಲೇಗೌಡರ ಪತ್ನಿ ಲಕ್ಷ್ಮಮ್ಮ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಪರ್ಸ್ನಲ್ಲಿ ಹಾಕಿ ರಾಗಿ ಚೀಲದಲ್ಲಿ ಕಟ್ಟಿಟ್ಟು ಊರಿಗೆ ಹೋಗಿದ್ದಾರೆ. ಈ ಬಗ್ಗೆ ತಿಳಿಯದ ಪತಿ ಕಲ್ಲೇಗೌಡ 10 ಮೂಟೆ ರಾಗಿಯನ್ನು ಮಾರಾಟ ಮಾಡಿದ್ದಾರೆ.
ರೈಸ್ ಮಿಲ್ನಲ್ಲಿ ರಾಗಿ ಸ್ವಚ್ಛ ಮಾಡಲು ಮೂಟೆಯಿಂದ ಸುರಿದ ವೇಳೆ ಚಿನ್ನಾಭರಣ ಇದ್ದ ಪರ್ಸ್ ಕಂಡುಬಂದಿದೆ. ಇದನ್ನು ಕಂಡ ರೈಸ್ ಮಿಲ್ ಮಾಲೀಕ ತಿಮ್ಮೇಗೌ ಅಭರಣಗಳನ್ನು ಪರಿಶೀಲಿಸಿದಾಗ ಜ್ಯವೆಲ್ಲರಿ ಅಂಗಡಿಯ ರಶೀದಿ ಪತ್ತೆಯಾಗಿತ್ತು. ಬಳಿಕ ಅವರು ನಾಗಮಂಗಲದ ಚಿನ್ನದಂಗಡಿಗೆ ತೆರಳಿ ವಿಚಾರಣೆ ನಡೆಸಿದ ಸಂದರ್ಭ ಚಿನ್ನಾಭರಣಗಳು ಕಲ್ಲಿನಾಥಪುರ ಗ್ರಾಮದ ಕಲ್ಲೇಗೌಡರಿಗೆ ಸೇರಿದ್ದಾಗಿವೆ ಎಂದು ತಿಳಿದುಬಂದಿದೆ.
ರೈಸ್ ಮಿಲ್ ಮಾಲೀಕ ತಿಮ್ಮೇಗೌಡ ವೃದ್ದೆಯ ಕುಟುಂಬವನ್ನು ಸಂಪರ್ಕಿಸಿ ಗುರುತಿನ ಚೀಟಿ ತಂದು ಆಭರಣ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. ಅದರಂತೆ ವೃದ್ದೆ ಹಾಗೂ ಆಕೆಯ ಪತಿ ತಿಮ್ಮೇಗೌಡರಿಗೆ ಸರಿಯಾದ ಮಾಹಿತಿ ನೀಡಿದ್ದು, ಗ್ರಾಮಸ್ಥರು ಹಾಗೂ ತಿಮ್ಮೇಗೌಡರು ಚಿನ್ನಾಭರಣವನ್ನು ವೃದ್ದೆಯ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.