ಮುಂಬೈ, ಅ 29 (DaijiworldNews/MS):ಐಷಾರಾಮಿ ಹಡಗು ಮಾದಕವಸ್ತು ಪ್ರಕರಣಕ್ಕೆ ತಳಕು ಹಾಕಿಕೊಂಡಿರುವ ಹಣದ ಬೇಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕವಸ್ತು ನಿಯಂತ್ರಣ ದಳದ (ಎನ್ಸಿಬಿ) ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರನ್ನು ಬಂಧಿಸುವ ಮೂರು ದಿನಗಳಿಗೂ ಮುನ್ನ ಅವರಿಗೆ ನೋಟಿಸ್ ನೀಡಲಾಗುವುದು ಎಂದು ಮುಂಬೈ ಪೊಲೀಸರು ಗುರುವಾರ ಬಾಂಬೆ ಹೈಕೋರ್ಟ್ಗೆ ತಿಳಿಸಿದ್ದಾರೆ.
ಮುಂಬೈ ಪೊಲೀಸರು ಇಂದು ನನ್ನನ್ನು ಬಂಧಿಸುತ್ತಾರೆ ಎಂಬುದು ನನ್ನ ಆತಂಕವಾಗಿದೆ. ಸರ್ಕಾರ ನನ್ನ ಹಕ್ಕುಗಳನ್ನು ಕಸಿದುಕೊಳ್ಳುವವರೆಗೆ ನ್ಯಾಯಮೂರ್ತಿಗಳು ಕಾಯಬಾರದುನ್ಯಾಯಮೂರ್ತಿಗಳು ನನ್ನ ಹಕ್ಕುಗಳನ್ನು ರಕ್ಷಿಸಬೇಕು. ನಾನು ಮಾದಕವಸ್ತು ಸಾಗಾಟಗಾರನಲ್ಲ. ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಅಥವಾ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವರ್ಗಾಯಿಸಬೇಕು. ಪೊಲೀಸ್ ಕಾಯಿದೆ ಉಲ್ಲಂಘಿಸಿ ತನಿಖೆ ಆರಂಭಿಸಲಾಗಿದೆ" ವಾಂಖೆಡೆ ಪರವಾಗಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಪೊಲೀಸರು ನೀಡಿದ ಭರವಸೆಯನ್ನು ದಾಖಲಿಸಿಕೊಂಡ ನ್ಯಾಯಮೂರ್ತಿಗಳಾದ ನಿತಿನ್ ಜಾಮ್ದಾರ್ ಮತ್ತು ಎಸ್ ವಿ ಕೊತ್ವಾಲ್ ಅವರಿದ್ದ ಪೀಠ ಸಿಬಿಐ ಅಥವಾ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಪ್ರಕರಣದ ತನಿಖೆ ವರ್ಗಾಯಿಸುವಂತೆ ಕೋರಿ ವಾಂಖೆಡೆ ಅವರು ಸಲ್ಲಿಸಿದ್ದ ಮನವಿಯನ್ನು ವಿಲೇವಾರಿ ಮಾಡಿತು.
ಬಂಧನಕ್ಕೆ ಮೂರು ಕೆಲಸದ ಅವಧಿಯ ದಿನಗಳು ಇರುವಂತೆ ನೋಟಿಸ್ ನೀಡಲಾಗುವುದು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಭರವಸೆ ನೀಡಿರುವುದಾಗಿ ಕೋರ್ಟ್ ತಿಳಿಸಿದೆ. ಬಳಿಕ ಅರ್ಜಿ ವಿಲೇವಾರಿ ಮಾಡಲು ಮುಂದಾದ ನ್ಯಾಯಾಲಯ ಪ್ರಕರಣದ ಅರ್ಹತೆಯ ಕುರಿತಾಗಿ ತಾನು ಯಾವುದೇ ತೀರ್ಪು ನೀಡಿಲ್ಲ ಎಂದು ಸ್ಪಷ್ಟಪಡಿಸಿತು.