ಬೀರೂರು, ಅ 29 (DaijiworldNews/MS): ಕುಟುಂಬದ ವಿರೋಧದ ನಡುವೆಯೂ ಪ್ರೀತಿಸಿದ ಅನ್ಯಜಾತಿಯ ಯುವಕನನ್ನು ಮದುವೆಯಾಗಲು ಹಠಹಿಡಿದಿದ್ದ ಪುತ್ರಿಯನ್ನು ತಂದೆಯೇ ಕೊಲೆಮಾಡಿದ ಘಟನೆ ಬೀರೂರಿನಲ್ಲಿ ಬುಧವಾರ ರಾತ್ರಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕು ಕೆಂಚಿಗೊಂಡನಕೊಪ್ಪದ ರಾಧಾ (18) ಹತ್ಯೆಗೀಡಾದವರು. ಯುವತಿಯ ತಂದೆ ಚಂದ್ರಪ್ಪ ಕೊಲೆ ಆರೋಪಿ. ಆತ ತನ್ನ ಪುತ್ರಿ ರಾಧಾಳನ್ನು ಬುಧವಾರ 8.30 ರ ಸುಮಾರಿಗೆ ಬೀರೂರು ರೈಲ್ವೆ ಗೇಟ್ ಸಮೀಪ ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ ಆರೋಪ ಕೇಳಿಬಂದಿದೆ.
ರಾಧಾ ಅದೇ ಊರಿನ ಯುವಕನನ್ನು ಪ್ರೀತಿಸಿದ್ದು, ಆಕೆ ಮನೆಯವರಿಗೆಗೆ ಇಷ್ಟ ಇರಲಿಲ್ಲ. ಸ್ಥಳ ಬದಲಾವಣೆ ಮಾಡಿದರೆ ಯುವಕನನ್ನು ಮರೆಯಬಹುದು ಎಂದು ಚನ್ನಗಿರಿ ತಾಲ್ಲೂಕಿನ ಮಲ್ಲಿಗೆರೆಯ ಚಂದ್ರಪ್ಪ ಸೋದರಿಯ ಮನೆಯಲ್ಲಿ ಬಿಡಲಾಗಿತ್ತು. ಊರಿನಲ್ಲಿ ಹಬ್ಬವಿದ್ದ ಕಾರಣ ಮಗಳನ್ನು ಬುಧವಾರ ರಾತ್ರಿ ಬೈಕ್ ನಲ್ಲಿ ಊರಿಗೆ ಕರೆದುಕೊಂಡು ಬರುತ್ತಿದ್ದ ಚಂದ್ರಪ್ಪ ಮಗಳಿಗೆ ಬುದ್ಧಿವಾದ ಹೇಳಿದ್ದಾನೆ. ಬೀರೂರು ತಲುಪುವಷ್ಟರಲ್ಲಿ ಕತ್ತಲಾಗಿದೆ. ಬೀರೂರು ಹೊರವಲಯದ ರೈಲ್ವೆ ಗೇಟ್ ಬಳಿ ಜನರ ಸಂಚಾರವಿಲ್ಲದ್ದನ್ನು ಗಮನಿಸಿ ಚಂದ್ರಪ್ಪ ಬೈಕ್ ನಿಲ್ಲಿಸಿದ್ದಾರೆ. ಗೇಟ್ ಪಕ್ಕದ ಬಂಡಿ ಜಾಡಿನಲ್ಲಿ ಇಬ್ಬರು ಸ್ವಲ್ಪ ದೂರ ಕ್ರಮಿಸಿದ್ದಾರೆ. ಪುತ್ರಿಯ ತಲೆ ಮೇಲಿದ್ದ ಅಂಗವಸ್ತ್ರವನ್ನು ಕುತ್ತಿಗೆಗೆ ಬಿಗಿದು, ಅಲ್ಲಿಯೇ ಇದ್ದ ಗುಂಡಿಯಲ್ಲಿ ಅದುಮಿ ಹತ್ಯೆ ಮಾಡಿದ್ದಾನೆ.
ಪುತ್ರಿಯನ್ನು ಕೊಲೆ ಮಾಡಿ ಮೃತದೇಹವನ್ನು ಬಿಟ್ಟು ಮಧ್ಯರಾತ್ರಿ 2.30 ರ ವೇಳೆಗೆ ಮನೆಗೆ ತಲುಪಿದ್ದಾನೆ. ಮನೆಯವರಿಗೆ ವಿಷಯ ತಿಳಿಸಿ ಪುತ್ರಿಯನ್ನು ಕೊಲೆ ಮಾಡಿದ ತಾನೂ ಬದುಕಬಾರದು ಎಂದು ನೇಣು ಹಾಕಿಕೊಳ್ಳಲು ಯತ್ನಿಸಿದ್ದಾನೆ. ಆತನಿಗೆ ಸಮಾಧಾನ ಮಾಡಿದ ಮನೆಯವರು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಚಂದ್ರಪ್ಪನಿಂದ ಮಾಹಿತಿ ಪಡೆದ ಪೊಲೀಸರು ಆತನನ್ಜು ಬೀರೂರು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಬೀರೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ.