ಪಣಜಿ, ಅ.29 (DaijiworldNews/PY): "ಹಲವು ದಶಕಗಳ ಕಾಲ ಭಾರತದ ರಾಜಕೀಯ ರಂಗದಲ್ಲಿ ಬಿಜೆಪಿ ಪ್ರಮುಖ ಪಾತ್ರ ವಹಿಸುವುದಂತೂ ಖಂಡಿತ" ಎಂದು ರಾಜಕಿಯ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.
ಪಣಜಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಸ್ವಾತಂತ್ರ್ಯದ ಬಳಿಕ ಸತತ ನಾಲ್ಕು ದಶಕಗಳಲ್ಲಿ ಕಾಂಗ್ರೆಸ್ ಹೇಗೆ ಈ ರಾಜಕೀಯ ರಂಗದಲ್ಲಿ ಅಭೇದ್ಯ ಕೋಟೆಯಂತಿತ್ತೋ ಅದೇ ರೀತಿ ಇನ್ನು ಬಿಜೆಪಿ ಇರಲಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಅರ್ಥವೇ ಆಗುತ್ತಿಲ್ಲ. ಇದೇ ರಾಹುಲ್ ಗಾಂಧಿ ಅವರ ಸಮಸ್ಯೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕೇವಲ ತಾತ್ಕಾಲಿಕವಾಗಿದ್ದು, ಸದ್ಯದಲ್ಲೇ ಅವರ ಜನಪ್ರಿಯತೆ ಕುಸಿಯಲಿದೆ ಎಂದು ಭಾವಿಸಿದ್ಧಾರೆ" ಎಂದು ತಿಳಿಸಿದ್ದಾರೆ.
"ಜನರು ಪ್ರಧಾನಿ ಮೋದಿ ಅವರನ್ನು ಅಧಿಕಾರದಿಂದ ತೆಗೆಯುತ್ತಾರೆ ಎನ್ನವುದು ಸುಳ್ಳು. ಒಂದು ವೇಳೆ ಮೋದಿಯವರು ಪದಚ್ಯುತಿಯಾದರೂ ಕೂಡಾ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುತ್ತದೆ" ಎಂದಿದ್ದಾರೆ.
"ಪ್ರಧಾನಿ ಮೋದಿಯವರ ಕುರಿತು ಜನರಲ್ಲಿ ಒಂದು ಅಸಹನೆ ಸೃಷ್ಟಿಯಾಗಿದ್ದು, ಅದು ನಿಧಾನವಾಗಿ ಹೆಚ್ಚಾಗುತ್ತಿದೆ. ಇದು ಜ್ವಾಲಾಮುಖಿಯ ರೀತಿ ಸ್ಫೋಟಗೊಂಡು, ಜನರೇ ಮೋದಿಯವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುತ್ತಾರೆ ಎನ್ನುವ ವಿಚಾರ ಒಂದು ದೊಡ್ಡ ಭ್ರಮೆ" ಎಂದು ಹೇಳಿದ್ದಾರೆ.
"ಬಿಜೆಪಿ ಅಧಿಕಾರದಲ್ಲಿ ಇರಲಿ ಅಥವಾ ಬಿಡಲಿ, ಹಲವು ದಶಕಗಳ ಕಾಲ ಭಾರತದ ರಾಜಕೀಯ ರಂಗದಲ್ಲಿ ಬಿಜೆಪಿ ಪ್ರಮುಖ ಪಾತ್ರ ವಹಿಸುವುದಂತೂ ಖಂಡಿತ. ಆದರೆ, ಈ ವಿಚಾರ ರಾಹುಲ್ ಗಾಂಧಿ ಅವರಿಗೆ ಅರ್ಥವಾಗುತ್ತಿಲ್ಲ" ಎಂದಿದ್ದಾರೆ.