ಬೆಂಗಳೂರು, ಅ. 28 (DaijiworldNews/SM): ಕನ್ನಡ ಉಳಿಸುವ ನಿಟ್ಟಿನಲ್ಲಿ ಸರಕಾರ ಕೂಡ ಮುಂದಡಿಯಿಟ್ಟಿದ್ದು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಾತ್ರವಲ್ಲದೆ, ಪದವಿ ಹಂತದ ತರಗತಿಗಳಲ್ಲೂ ಕನ್ನಡ ಕಡ್ಡಾಯಗೊಳಿಸಲು ನಿರ್ಧಾರ ಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ರಾಜ್ಯಾದ್ಯಂತ ‘ಕನ್ನಡಕ್ಕಾಗಿ ನಾವು’ಎಂಬ ಅಭಿಯಾನದಲ್ಲಿ ಲಕ್ಷಾಂತರ ಜನರು ಕೈಜೋಡಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯದ ಹಲವೆಡೆ ಬೆಳಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ನಡುವೆ ಮಾತನಾಡಿದ ಸಿಎಂ ನಾನು ಮುಖ್ಯಮಂತ್ರಿಯಾದ ನಂತರ ನಮ್ಮ ಸರ್ಕಾರವು ಮಾತೃಭಾಷೆಗೆ ಪ್ರಾಮುಖ್ಯತೆ ನೀಡುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ಪ್ರಾಥಮಿಕ ಅಥವಾ ಪ್ರೌಢ ಶಿಕ್ಷಣ ಮಾತ್ರವಲ್ಲದೆ ಪದವಿ ಹಂತದಲ್ಲೂ ಕನ್ನಡ ಕಡ್ಡಾಯಗೊಳಿಸಿ ಸುಗ್ರೀವಾಜ್ಞೆ ತಂದಿದ್ದೆವು, ಸದ್ಯ ಪ್ರಕರಣ ಹೈಕೋರ್ಟ್ನಲ್ಲಿದೆ, ಅದಕ್ಕಾಗಿ ಹೋರಾಟ ಮುಂದುವರಿಸುತ್ತೇವೆ ಎಂದು ಸಿಎಂ ತಿಳಿಸಿದರು.