ಬೆಂಗಳೂರು, ಅ.28 (DaijiworldNews/PY): "ಬೆಂಗಳೂರು ಉಸ್ತುವಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿಯೇ ಇರಲಿ" ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆ ಉಸ್ತುವಾರಿ ನನಗೆ ನೀಡಿದ್ದಾರೆ. ನನಗೆ ಹೆಚ್ಚುವರಿ ಉಸ್ತುವಾರಿ ಜವಾಬ್ದಾರಿ ಬೇಡ ಎಂದು ಸಿಎಂ ಬಳಿ ತಿಳಿಸಿದ್ದೇನೆ. ಹೀಗಿರುವಾಗ ಬೆಂಗಳೂರು ಉಸ್ತುವಾರಿ ಬೇಕು ಎಂದು ನಾನು ಏಕೆ ಕೇಳಲಿ?" ಎಂದು ಪ್ರಶ್ನಿಸಿದ್ದಾರೆ.
"ಆರ್ ಅಶೋಕ್ ಹಾಗೂ ಸೋಮಣ್ಣ ಒಳ್ಳೆಯ ಸ್ನೇಹಿತರು. ಹಾಗಾಗಿ ಅವರಿಬ್ಬರ ನಡುವೆ ನಡುಯುವ ಕಿತ್ತಾಟವನ್ನು ಗಂಭೀರವಾಗಿ ಪರಿಗಣಿಸಬೇಡಿ. ನಮ್ಮಲ್ಲಿ ಶೀತಲ ಸಮರ ಇಲ್ಲ" ಎಂದಿದ್ದಾರೆ.
ವಿ ಸೋಮಣ್ಣ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸೋಮಣ್ಣ ಅವರು 40 ವರ್ಷದ ಹಿರಿಯರು. ಅವರು ಯಾವ ಹಿನ್ನೆಲೆಯಲ್ಲಿ ಆ ರೀತಿ ಹೇಳಿದ್ದಾರೆ ಎಂದು ತಿಳಿದಿಲ್ಲ. ನಾವೆಲ್ಲಾ ಇತ್ತೀಚೆಗೆ ಬಿಜೆಪಿಗೆ ಬಂದಿರುವುದು. ಯಾವ ಆಟ ಎಂದು ಅವರೇ ತಿಳಿಸಬೇಕು" ಎಂದು ಹೇಳಿದ್ದಾರೆ.
ಬಿಟ್ ಕಾಯಿನ್ ದಂಧೆ ಸಂಬಂಧ ತನಿಖೆ ನಡೆಯಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಸಿದ್ದರಾಮಯ್ಯ ಅವರು ಕೊರೊನಾ ಬರುವ ಮುನ್ನ ಚೆನ್ನಾಗಿದ್ದರು. ಕೊರೊನಾ ಬಂದ ಬಳಿಕ ಏನೇನೋ ಮಾತನಾಡುತ್ತಾರೆ. ಈ ಬಗ್ಗೆ ಅವರಿಗೆ ತಿಳಿದಿಲ್ಲ. ಸಿದ್ದರಾಮಯ್ಯ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಬೇಡಿ. ಬಿಜೆಪಿ ಸರ್ಕಾರಕ್ಕೆ ಯಾವುದೇ ಕಂಟಕ ಇಲ್ಲ. ಕಂಟಕ ಇರುವುದು ಕಾಂಗ್ರೆಸ್ ಪಕ್ಷದವರಿಗೆ ಮಾತ್ರ" ಎಂದಿದ್ದಾರೆ.