ನವದೆಹಲಿ, ಅ.28 (DaijiworldNews/PY): ದೇಶದಾದ್ಯಂತ ಪದವಿಪೂರ್ವ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆದ 2021-22ನೇ ಸಾಲಿನ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ.
ಪರೀಕ್ಷೆಯ ದಿನದಂದು ಮಹಾರಾಷ್ಟ್ರದ ಕೇಂದ್ರವೊಂದರಲ್ಲಿ ವೈಷ್ಣವಿ ಭೂಪಾಲಿ ಹಾಗೂ ಅಭಿಷೇಕ್ ಶಿವಾಜಿ ಎನ್ನುವ ಇಬ್ಬರು ವಿದ್ಯಾರ್ಥಿಗಳ ಒಎಂಆರ್ ಹಾಳೆ ಹಾಗೂ ಬುಕ್ಲೆಟ್ ಅದಲು ಬದಲಾಗಿದ್ದವು. ಹಾಗಾಗಿ ಅವರಿಗೆ ಮತ್ತೊಮ್ಮೆ ಅವಕಾಶ ನೀಡಬೇಕು. ಇಬ್ಬರ ಪರೀಕ್ಷಾ ಫಲಿತಾಂಶವನ್ನು ಸೆಪ್ಟೆಂಬರ್ 12ರಂದು ನಡೆಸಿದ ಪರೀಕ್ಷೆಯ ಫಲಿತಾಂಶದೊಂದಿಗೆ ಪ್ರಕಟಿಸಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಹೈಕೋರ್ಟ್ನ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಂಸ್ಥೆಯ ಪರವಾಗಿ ವಾದಿಸಿದ್ದರು. ಸುಪ್ರೀಂಕೋರ್ಟ್ ಎಲ್.ನಾಗೇಶ್ವರ ರಾವ್, ಸಂಜೀವ್ ಖನ್ನಾ ಹಾಗೂ ಬಿ.ಆರ್.ಗಾವಿ ಅವರನ್ನೊಳಗೊಂಡ ವಿಭಾಗೀಯ ಪೀಠ, ಬಾಂಬೆ ಹೈಕೋರ್ಟ್ನ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದು, ಪರೀಕ್ಷಾ ಸಂಸ್ಥೆ ಎನ್ಇಇಟಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಬೇಕು ಎಂದು ಹೇಳಿದೆ.
ದೀಪಾವಳಿಯ ಬಳಿಕ ತಕರಾರು ಅರ್ಜಿ ಸಲ್ಲಿಸಿರುವ ಇಬ್ಬರು ವಿದ್ಯಾರ್ಥಿಗಳ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ನೋಟಿಸ್ ನೀಡಿ ಕೌಂಟರ್ ದಾಖಲಿಸಲು ಅನುಮತಿ ನೀಡಲಾಗುವುದು. ಇಬ್ಬರು ವಿದ್ಯಾರ್ಥಿಗಳಿಗಾಗಿ 16 ಲಕ್ಷ ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲು ಆಗುವುದಿಲ್ಲ ಎಂದು ಹೇಳಿದೆ.