ಹುಬ್ಬಳ್ಳಿ, ಅ.28 (DaijiworldNews/HR): ಬಿಟ್ ಕಾಯಿನ್ ಹಾಗೂ ಡ್ರಗ್ಸ್ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗಳು ಭಾಗಿಯಾಗಿದ್ದರೆ ಅಂತಹವರ ಹೆಸರು ಹೇಳಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸವಾಲು ಹಾಕಿದ್ದಾರೆ.
ಸಿದ್ದರಾಮಯ್ಯ ಅವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, "ರಾಜ್ಯದ ತನಿಖಾ ಸಂಸ್ಥೆಗಳು ಪ್ರಕರಣದ ಸಮಗ್ರ ತನಿಖೆ ನಡೆಸಿದ್ದು, ಇದಾದ ಮೇಲೂ ಪ್ರಕರಣದ ತನಿಖೆಯನ್ನು ನಾವೇ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಗೆ ವಹಿಸಿದ್ದೇವೆ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ" ಎಂದರು.
ಇನ್ನು ಕರ್ನಾಟಕದ ಪ್ರಭಾವಿ ರಾಜಕಾರಣಿಗಳು ಶಾಮೀಲಾಗಿರುವ ಡ್ರಗ್ಸ್ ಮತ್ತು ಬಿಟ್ ಕಾಯಿನ್ ಹಗರಣವನ್ನು ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.