ಶಿವಮೊಗ್ಗ, ಅ.28 (DaijiworldNews/HR): ಕಾಂಗ್ರೆಸ್ಸಿಗರಿಗೆ ಸೋಲಿನ ಭೀತಿ ಕಾಡುತ್ತಿದ್ದು, ಏನೇನೋ ಆರೋಪ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಎಲ್ಲ ರಾಜಕಾರಣಿಗಳು ನಾವು ರಾಜ್ಯದ ಜನರ ಪ್ರತಿನಿಧಿಗಳು ಎಂದು ನೆನಪಿಟ್ಟುಕೊಳ್ಳಬೇಕಿತ್ತು" ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾವೇನು ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳಿ ಮತ ಕೇಳಬೇಕು. ಅದನ್ನು ಬಿಟ್ಟು ವೈಯಕ್ತಿಕ ಟೀಕೆ ಸರಿಯಲ್ಲ. ಅಶ್ಲೀಲ ಪದಗಳ ಬಳಕೆಯೂ ಹೆಚ್ಚಾಗಿದೆ. ಇದರಿಂದ ನಾನು ನೊಂದಿದ್ದೇನೆ. ನಾನು ಸೇರಿದಂತೆ ಎಲ್ಲರೂ ವೈಯಕ್ತಿಕ ಟೀಕೆ ಮಾಡುವುದನ್ನು ಬಿಡಬೇಕಿದೆ" ಎಂದರು.
ಇನ್ನು ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆ ನಡೆಸಲು ಸಿದ್ಧತೆ ನಡೆದಿದ್ದು, ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ನಾವೇ ಗೆಲುವು ಸಾಧಿಸುತ್ತೇವೆ. ಎರಡು ಕ್ಷೇತ್ರದಲ್ಲೂ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ. ಕಾಂಗ್ರೆಸ್ ಜಾತಿ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ನಮಗೆ ದುಡ್ಡು ಹಂಚುತ್ತಿದ್ದಾರೆ ಎನ್ನುತ್ತಾರೆ. ಆದರೆ ಅವರೆ ಹೆಚ್ಚು ದುಡ್ಡು ಹಂಚುತ್ತಿದ್ದಾರೆ" ಎಂದು ಹೇಳಿದ್ದಾರೆ.