ದಾವಣಗೆರೆ, ಅ.28 (DaijiworldNews/PY): "ಪ್ರಾಥಮಿಕ ಹಂತದಲ್ಲೂ ಮುಂದಿನ ಶೈಕ್ಷಣಿಕ ವರ್ಷದಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆ ಮಾಡಲು ಸರ್ಕಾರ ಎಲ್ಲಾ ರೀತಿಯ ಅಗತ್ಯವಾದ ತಯಾರಿ ಮಾಡಿಕೊಳ್ಳುತ್ತಿದೆ" ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಹಂತದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮದನಗೋಪಾಲ್ ನೇತೃತ್ವದ ಟಾಸ್ಕ್ ಫೋರ್ಸ್ ಸಮಿತಿಯನ್ನ ರಚಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಗೆ ಕೇಂದ್ರ ಸರ್ಕಾರ ಒಲವು ಹೊಂದಿದೆ. ಹಾಗಾಗಿ ರಾಜ್ಯದಲ್ಲಿಯೂ ಪ್ರಾಥಮಿಕ ಹಂತದಲ್ಲಿ ನೂತನ ರಾಷ್ಟ್ರೀ ಶಿಕ್ಷಣ ನೀತಿ ಅಳವಡಿಸಲಾಗುವುದು" ಎಂದಿದ್ದಾರೆ.
"ಕೊರೊನಾ ಕಾರಣದಿಂದ ಶಿಕ್ಷಣ ಕ್ಷೇತ್ರ ಸಾಕಷ್ಟು ತೊಂದರೆ ಅನುಭವಿಸಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಾಲೆ ಆರಂಭಿಸಲಾಗಿದೆ. ಸದ್ಯಕ್ಕೆ ಪಠ್ಯಕ್ರಮ ಕಡಿತದ ಕುರಿತು ಚಿಂತನೆ ನಡೆಸಿಲ್ಲ. ಡಿಸೆಂಬರ್ ತಿಂಗಳ ಬಳಿಕ ಪರೀಕ್ಷೆ ದೃಷ್ಟಿಯಿಂದ ಪಠ್ಯ ಕ್ರಮ ಕಡಿತಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುವುದು" ಎಂದು ತಿಳಿಸಿದ್ದಾರೆ.
"ಒಂದು ಶಾಲೆಯ 31 ಮಕ್ಕಳಲ್ಲಿ ಕೊರೊನಾದ ಪ್ರಾಥಮಿಕ ಲಕ್ಷಣ ಕಂಡುಬಂದಿದೆ. ಈ ಹಿನ್ನೆಲೆ ಮೂರು ದಿನಗಳ ಕಾಲ ಆ ಶಾಲೆಯನ್ನು ಮುಚ್ಚಲಾಗಿದೆ. ಅಗತ್ಯವಾದ ಮುಂಜಾಗ್ರತಾ ಕ್ರಮ ಕೈಗೊಂಡ ಬಳಿಕ ಶಾಲೆಯನ್ನು ಮತ್ತೆ ಆರಂಭಿಸಲಾಗುವುದು" ಎಂದಿದ್ದಾರೆ.