ಬೆಂಗಳೂರು, ಅ.28 (DaijiworldNews/HR): ಸುಮ್ಮನೇ ಗೋವಿನ ಹೆಸರಲ್ಲಿ ನಾಟಕವೇಕೆ? ಎಂದು ಹಿರಿಯ ಕಾಂಗ್ರೆಸ್ ನಾಯಕ ಡಾ. ಎಚ್.ಸಿ.ಮಹಾದೇವಪ್ಪ ರಾಜ್ಯ ಬಿಜೆಪಿ ಸರಕಾರವನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ದೀಪಾವಳಿ ಹಬ್ಬದಂದು ದೇವಾಲಯಗಳಲ್ಲಿ ಗೋ ಪೂಜೆ ಮಾಡಬೇಕೆಂದು ಆದೇಶ ಹೊರಡಿಸಿರುವ ರಾಜ್ಯ ಬಿಜೆಪಿ ಸರ್ಕಾರವು ದೀಪಾವಳಿಯ ವೇಳೆ ಸಹಜವಾಗಿ ನಡೆಯುವ ಗೋ ಪೂಜೆ ಆಚರಣೆಗಳಿಗೂ ತನ್ನ ರಾಜಕೀಯ ಬಣ್ಣ ಬಳಿದಿದೆ" ಎಂದರು.
"ಗ್ರಾಮೀಣ ಭಾರತದಲ್ಲಿ ಕೃಷಿಯ ಮೂಲಕ ಬದುಕು ಕಂಡು ಕೊಂಡಿರುವ ಎಲ್ಲಾ ರೈತರೂ ಕೂಡಾ ದೀಪಾವಳಿ ಮತ್ತು ಸಂಕ್ರಾಂತಿ ಹಬ್ಬದ ವೇಳೆ ಹಸುಗಳ ಮೈತೊಳೆದು, ಅಲಂಕಾರ ಮಾಡಿ, ನಂತರ ಕಿಚ್ಚು ಹಾಯಿಸುವಂತಹ ಆಚರಣೆಯು ಅನಾದಿ ಕಾಲದಿಂದಲೂ ಇದೆ. ಈ ಆಚರಣೆಯನ್ನು ನಮ್ಮ ರೈತರು ಬಿಜೆಪಿಗರಿಂದ ಕಲಿಯಬೇಕೇನು?" ಎಂದು ಪ್ರಶ್ನಿಸಿದ್ದಾರೆ.
ಇನ್ನು "ಬೆಲೆ ಏರಿಕೆಯ ನಡುವೆ ದೀಪಾವಳಿಯೂ ಬೇಡ ಏನೂ ಬೇಡ ಎಂಬ ಪರಿಸ್ಥಿತಿಗೆ ಜನ ಸಾಮಾನ್ಯರನ್ನು ನೂಕಿರುವ ಬಿಜೆಪಿಗರು ಗೋವಿನ ಹೆಸರಲ್ಲಿ ರಾಜಕೀಯ ಮಾಡುತ್ತಿರುವುದು ಅತ್ಯಂತ ಹಾಸ್ಯಾಸ್ಪದ ಬೆಳವಣಿಗೆ. ಇವರಿಗೆ ನಿಜವಾಗಲೂ ಹಸುಗಳ ಬಗ್ಗೆ ಪ್ರೀತಿ ಇದ್ದರೆ ಮೊದಲು ಇವರು ಮಾಡುತ್ತಿರುವ ಗೋಮಾಂಸ ರಫ್ತನ್ನು ನಿಲ್ಲಿಸಲಿ!" ಎಂದರು.
"ಹೈನುಗಾರಿಕೆಯನ್ನೇ ಉಪ ಕಸುಬಾಗಿಸಿಕೊಂಡಿರುವ ನಮ್ಮೆಲ್ಲಾ ರೈತರ ಕುಟುಂಬಗಳಿಗೆ ತಲಾ 2 ಹಸುಗಳನ್ನು ನೀಡುವ ಮೂಲಕ ಹಸುವಿನ ಮತ್ತು ರೈತರ ಬದುಕಿಗೆ ನೆರವಾಗಲಿ. ಗಗನಕ್ಕೆ ಏರಿರುವ ರಸಗೊಬ್ಬರದ ಬೆಲೆ ಇಳಿಸಲಿ. ಕೃಷಿ ಉಪಕರಣಗಳ ಬೆಲೆಯನ್ನು ತಗ್ಗಿಸಿ ಕೃಷಿ ಉತ್ಪಾದನೆಯನ್ನು ಉತ್ತೇಜಿಸಲಿ.ಸುಮ್ಮನೇ ಗೋವಿನ ಹೆಸರಲ್ಲಿ ನಾಟಕವೇಕೆ?" ಎಮ್ದು ಪ್ರಶ್ನಿಸಿದ್ದಾರೆ.