ನವದೆಹಲಿ, ಅ.28 (DaijiworldNews/PY): ಶೀಘ್ರವೇ ಸರ್ಕಾರಿ ಪಡಿತರ ಅಂಗಡಿಗಳಲ್ಲಿ ಗ್ಯಾಸ್ ಸಿಲಿಂಡರ್ ಖರೀದಿ ಮಾಡಲು ಸಾಧ್ಯವಾಗಲಿದೆ ಎನ್ನುವ ವರದಿಯೊಂದು ಪ್ರಕಟವಾಗಿದೆ.
ಪಡಿತರ ಅಂಗಡಿಗಳ ಆರ್ಥಿಕ ಕಾರ್ಯ ಸಾಧ್ಯತೆಯನ್ನು ಹೆಚ್ಚಿಸುವ ಸಲುವಾಗಿ ಸಣ್ಣ ಎಲ್ಪಿಜಿ ಸಿಲಿಂಡರ್ಗಳ ಚಿಲ್ಲರೆ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಇದರೊಂದಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಹಣಕಾಸಿ ಸೇವಗಳನ್ನು ನೀಡಲು ಯೋಜಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಹಾಗೂ ರಾಜ್ಯಗಳ ನಡುವಿನ ವರ್ಚುವಲ್ ಸಭೆಯಲ್ಲಿ ಈ ಯೋಜನೆಯನ್ನು ಆರಂಭಿಸುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ಸಭೆಯಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವಾಲಯ, ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಪ್ರತಿನಿಧಿಗಳು ಭಾಗವಹಿಸಿದ್ದರು.
"ಎಫ್ಪಿಎಸ್ನ ಆರ್ಥಿಕ ಕಾರ್ಯ ಸಾಧ್ಯತೆಯನ್ನು ಹೆಚ್ಚಿಸಲು ಬಲವಾದ ಕ್ರಮಗಳನ್ನು ಕೈಗೊಳ್ಳಲಾಗುವುದು. ಎಫ್ಪಿಎಸ್ ಮೂಲಕ ಸಣ್ಣ ಎಲ್ಪಿಜಿ ಸಿಲಿಂಡರ್ಗಳ ಚಿಲ್ಲರೆ ಮಾರಾಟದ ಯೋಜನೆಯು ಪರಿಗಣೆಯಲ್ಲಿದೆ" ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ.
"ಪಡಿತರ ಅಂಗಡಿಗಳ ಮುಖೇನ ಸಣ್ಣ ಎಲ್ಪಿಜಿ ಸಿಲಿಂಡರ್ಗಳ ಚಿಲ್ಲರೆ ಮಾರಾಟದ ಪ್ರಸ್ತಾಪವನ್ನು ತೈಲ ಮಾರುಕಟ್ಟೆ ಕಂಪೆನಿಗಳು ಪ್ರತಿನಿಧಿಗಳು ಶ್ಲಾಘಿಸಿದ್ದಾರೆ. ಆಸಕ್ತ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಅಗತ್ಯವಾದ ಬೆಂಬಲ ನೀಡಲಾಗುವುದು" ಎಂದು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆಹಾರ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್, "ಸಣ್ಣ ಸಿಲಿಂಡರ್ಗಳನ್ನು ಸರ್ಕಾರಿ ಪಡಿತರ ಕೇಂದ್ರಗಳ ಮೂಲಕ ಮಾರಾಟ ಮಾಡಲು ಸಿದ್ದತೆ ನಡೆಸಲಾಗುತ್ತಿದೆ. ಈ ಕುರಿತು ಪಡಿತರದಾರರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅರಿವು ಮೂಡಿಸುವುದು ಮುಖ್ಯ. ತಮ್ಮ ಸಚಿವಾಲಯವು, ಸರ್ಕಾರಿ ಪಡಿತರ ಅಂಗಡಿಗಳ ಆರ್ಥಿಕ ಸದೃಢತೆಯನ್ನು ಹೆಚ್ಚಿಸಲು ಪ್ರಯತ್ನಗಳನ್ನು ಮಾಡಿದೆ" ಎಂದು ಹೇಳಿದ್ದಾರೆ.