ಬೆಂಗಳೂರು, ಅ 28 (DaijiworldNews/MS):ಬೆಲೆ ಏರಿಕೆ ವಿರುದ್ದ ಕೇಂದ್ರದ ವಿರುದ್ದ ಹರಿಹಾಯ್ದಿರುವ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ "ದೇಶವನ್ನಾಳಿದ ಬ್ರಿಟಿಷರಿಗಾದರೂ ಜನರ ಮೇಲೆ ಕೊಂಚ ಕರುಣೆಯಿತ್ತು.ಆದರೆ ಮೋದಿ ಸರ್ಕಾರ ಬ್ರಿಟಿಷ್ ಆಡಳಿತಕ್ಕಿಂತಲೂ ಕ್ರೂರವಾಗಿದೆ. ಬ್ರಿಟಿಷರಿಗಿಂತ ಕಡೆಯಾಗಿ ತೆರಿಗೆ ಶೋಷಣೆ ಮಾಡುತ್ತಿರುವ ಕೇಂದ್ರ ಸರ್ಕಾರ ಬಡವರ ಪಾಲಿಗೆ ಹೆಗಲೇರಿದ ಶನಿಯಾಗಿದೆ" ಎಂದು ಕಿಡಿಕಾರಿದ್ದಾರೆ.
ತ ಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು,ಬ್ರಿಟಿಷರಿಗಿಂತ ಕಡೆಯಾಗಿ ತೆರಿಗೆ ಶೋಷಣೆ ಮಾಡುತ್ತಿರುವ ಕೇಂದ್ರ ಸರ್ಕಾರ ಬಡವರ ಪಾಲಿಗೆ ಹೆಗಲೇರಿದ ಶನಿಯಾಗಿದೆ. ಬಡ ಜನರನ್ನು ಹೀನಾಯವಾಗಿ ಶೋಷಿಸುತ್ತಿರುವ ಈ ಸರ್ಕಾರಕ್ಕೆ ದೇಶದ ಬಡವರ ಶಾಪ ತಟ್ಟದೇ ಬಿಡದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರದ ತೆರಿಗೆ ಸರ್ಕಾರ ಬಡವರು ಬದುಕುವ ಎಲ್ಲಾ ದಾರಿಗಳನ್ನು ಮುಚ್ಚಿ ಹಾಕುತ್ತಿದೆ. ಈಗಾಗಲೇ LPG ದರ 910 ರೂಪಾಯಿ. ನವೆಂಬರ್ನಲ್ಲಿ ಮತ್ತೆ ನೂರು ರೂಪಾಯಿ ಹೆಚ್ಚಳ ಮಾಡಿದರೆ ಬಡವರ ಗತಿಯೇನು?ಈ ಸರ್ಕಾರಕ್ಕೆ ಜನರ ಮೇಲ್ಯಾಕೆ ಇಷ್ಟೊಂದು ನಿಷ್ಕರುಣೆ? ಮೋದಿಯವರೆ ನಿಮ್ಮ ಆಡಳಿತದಲ್ಲಿ ಜನರು ಬದುಕಬೇಕೋ? ಅಥವಾ ಉಪವಾಸ ಬಿದ್ದು ಸಾಯಬೇಕೋ?" ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಬೆಲೆ ಏರಿಕೆ ಕುರಿತು ಜನರಿಗೆ ಆಕ್ರೋಶವಿಲ್ಲ. ಕಾಂಗ್ರೆಸ್ ಪಕ್ಷದವರಿಗೆ ಮಾತ್ರ ಆಕ್ರೋಶವಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿಕೆಗೆ ಪ್ರತಿಕ್ರಿಯಿಸಿ ಹರಿಹಾಯ್ದಿರುವ ದಿನೇಶ್ ಗುಂಡೂರಾವ್ ಕೇಂದ್ರ ಸಚಿವ ಭಗವಂತ ಖೂಬಾ ಯಾವ ಗ್ರಹದಲ್ಲಿದ್ದಾರೆ, ಜನ ಬೆಲೆ ಏರಿಕೆ ವಿರುದ್ಧ ಬೀದಿಗಿಳಿದಿರುವುದು ಕಣ್ಣಿಗೆ ಕಾಣುತ್ತಿಲ್ಲವೆ ಎಂದು ಪ್ರಶ್ನಿಸಿದ್ದಾರೆ.
"ಬೆಲೆಯೇರಿಕೆ ಎಲ್ಲಿದೆ ಎಂದಿರುವ ಸಚಿವ ಭಗವಂತ ಖೂಬಾ ಯಾವ ಗ್ರಹದಲ್ಲಿದ್ದಾರೆ?ಜನ ಬೆಲೆಯೇರಿಕೆಯ ವಿರುದ್ಧ ಬೀದಿಗಿಳಿದಿರುವುದು ಕಣ್ಣಿಗೆ ಕಾಣುತ್ತಿಲ್ಲವೆ? ಬೆಲೆಯೇರಿಕೆಯ ವಿರುದ್ಧ ಜನರ ಅಸಹನೆ ಆಕ್ರೋಶದ ರೂಪ ಪಡೆಯುತ್ತಿದೆ.ಇಷ್ಟಾದರೂ ಅದ್ಯಾವ ಭಂಡತನದಿಂದ ಬೆಲೆಯೇರಿಕೆ ಆಗಿಲ್ಲ ಎಂದು ಹೇಳುತ್ತೀರಿ? 80ರೂ. ಇದ್ದ ಅಡುಗೆ ಎಣ್ಣೆ ಈಗ 180ರೂ. ಆಗಿದೆ. 75ರೂ. ಇದ್ದ ಪೆಟ್ರೋಲ್ ಈಗ 113ರೂ. ಆಗಿದೆ. 80ರೂ. ಇದ್ದ ಡೀಸೆಲ್ 103ರೂ., 500ರೂ. ಇದ್ದ ಸಿಲಿಂಡರ್ ಬೆಲೆ 910ರೂ. ಆಗಿರುವುದು ಬೆಲೆ ಏರಿಕೆ ಅಲ್ಲವೆ ಎಂದು ಅವರು ಪ್ರಶ್ನಿಸಿದ್ದಾರೆ.
ನೀವು ಕೇಂದ್ರ ಸಚಿವರು. ನಿಮಗೆ ಇದು ದುಬಾರಿ ಎನಿಸದಿರಬಹುದು. ಆದರೆ, ಜನಸಾಮಾನ್ಯರ ಪಾಡೇನು? ಅವರೇನು ನಿಮ್ಮಷ್ಟು ಸಿರಿವಂತಿಕೆ ಕುಳಗಳೇ? ಇದನ್ನು ನೀವು ಅರ್ಥ ಮಾಡಿಕೊಳ್ಳದೆ ಈ ರೀತಿಯ ಹೇಳಿಕೆ ನೀಡುವುದು ಎಷ್ಟು ಸಮಂಜಸ ಎಂದು ಅವರು ಹೇಳಿದ್ದಾರೆ.