ಶ್ರೀನಗರ, ಅ.28 (DaijiworldNews/HR): ಟಿ-20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನವು ಭಾರತ ವಿರುದ್ಧ ಗೆದ್ದಿರುವುದಕ್ಕೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ವೈದ್ಯಕೀಯ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿರುವ ಬಗ್ಗೆ ಈಗಾಗಲೇ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಪಾಕ್ ಘೋಷಣೆಗೆ ವಿರೋಧಿಸಿದ ವಿದ್ಯಾರ್ಥಿನಿಗೆ ಇದೀಗ ಬೆದರಿಕೆ ಕರೆಗಳು ಬರುತ್ತಿರುವುದಾಗಿ ವರದಿಯಾಗಿದೆ.
ಶ್ರೀನಗರದ ಸೌರದಲ್ಲಿರುವ ಸ್ಕಿಮ್ಸ್ ಕಾಲೇಜಿನ ಮೆಡಿಕಲ್ ವಿದ್ಯಾರ್ಥಿನಿ ಅನನ್ಯ ಜಮ್ವಾಲ್ಗೆ ಬೆದರಿಕೆ ಕರೆಗಳು ಬರುತ್ತಿದ್ದು, ಅಬ್ದುಲ್ ಘಾಜಿ ಎಂಬಾತ ತನ್ನ ಟ್ವಿಟರ್ನಲ್ಲಿ ಅನನ್ಯರನ್ನು 'ಅಪರಾಧಿ' ಹಾಗೂ 'ಪೊಲೀಸ್ ಮಾಹಿತಿದಾರ' ಎಂದು ಹೇಳಿದ್ದಾನೆ.
ಇನ್ನು ಪಾಕಿಸ್ತಾನದ ಪರ ಘೋಷಣೆ ಕೂಗಿದ ಮೆಡಿಕಲ್ ವಿದ್ಯಾರ್ಥಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆ ಅಡಿ ಎಫ್ಐಆರ್ ದಾಖಲಾಗಲು ಅನನ್ಯಳೇ ಕಾರಣ ಎಂದು ಟ್ವಿಟರ್ನಲ್ಲಿ ಅಬ್ದುಲ್ ಘಾಜಿ ಆರೋಪಿಸಿದ್ದಾನೆ.
ಪಾಕ್ ಗೆಲುವು ದಾಖಲಿಸಿದ ಬೆನ್ನಲ್ಲೇ ಕೆಲವು ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿರುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.