ಶ್ರೀನಗರ, ಅ.28 (DaijiworldNews/PY): "ಮುಂದೊಂದು ದಿನ ಇಡೀ ಕಾಶ್ಮೀರವನ್ನು ಭಾರತ ತನ್ನದಾಗಿಸಿಕೊಳ್ಳುವ ವಿಶ್ವಾಸ ಇದೆ" ಎಂದು ವೆಸ್ಟರ್ನ್ ಏರ್ ಕಮಾಂಡ್ನ ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಏರ್ ಮಾರ್ಷಲ್ ಅಮಿತ್ ದೇವ್ ತಿಳಿಸಿದ್ದಾರೆ.
ಭಾರತೀಯ ಪಡೆಗಳ ಬದ್ಗಾಮ್ ಲ್ಯಾಂಡಿಂಗ್ನ 75ನೇ ವಾರ್ಷಿಕಕೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, "ಸದ್ಯಕ್ಕೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಯಾವುದೇ ಯೋಜನೆ ಇಲ್ಲ" ಎಂದಿದ್ದಾರೆ.
"ಪಾಕಿಸ್ತಾನಿಗಳು ಪಿಒಕೆಯಲ್ಲಿ ನೆಲೆಸಿರುವ ಜನರನ್ನು ನ್ಯಾಯಯುತವಾಗಿ ನಡೆಸಿಕೊಳ್ಳುತ್ತಿಲ್ಲ" ಎಂದು ಹೇಳಿದ್ದಾರೆ.
"ರಾಷ್ಟ್ರಗಳ ಒಂದುಗೂಡುವಿಕೆಗೆ ಇತಿಹಾಸವು ಸಾಕ್ಷಿಯಾಗಲಿದೆ. ರಾಷ್ಟ್ರ ಒಗ್ಗೂಡಿಸಲು ಸದ್ಯಕ್ಕೆ ನಮ್ಮ ಬಳಿ ಯಾವುದೇ ರೀತಿಯಾದ ಯೋಜನೆ ಇಲ್ಲ. ಆದರೆ, ರಾಷ್ಟ್ರ ಬೆಸೆಯಲು ದೇವರ ಇಚ್ಛೆ ಯಾವಾಗಲೂ ಇದ್ದೇ ಇರುತ್ತದೆ" ಎಂದಿದ್ದಾರೆ.
"ಇಂದು ವಿಶ್ವದಲ್ಲಿ ತಂತ್ರಜ್ಞಾನದ ಬದಲಾವಣೆ ತುಂಬಾ ವೇಗವಾಗಿದ್ದು, ನಾವು ಅದರೊಂದಿಗೆ ಹೆಜ್ಜೆ ಹಾಕಬೇಕು. ಆರ್ಥಿಕವಾಗಿ ಬೆಳೆಯಬೇಕಾದ ಯಾವುದೇ ರಾಷ್ಟ್ರವೂ ಬಲಿಷ್ಠವಾದ ಮಿಲಿಟರಿಯನ್ನು ಹೊಂದಿರಬೇಕಾದರೆ, ನಾವು ಮುಂದಿನ ವರ್ಷಗಳಲ್ಲಿ ರಾಷ್ಟ್ರಕ್ಕೆ ನಮ್ಮ ಬಾಧ್ಯತೆಯನ್ನು ಪೂರೈಸಬೇಕಿದೆ. ಈ ನಿಟ್ಟಿನಲ್ಲಿ ನಾವು ಸವಾಲಿಗೆ ಯಾವಾಗಲೂ ಸಿದ್ದರಿದ್ದೇವೆ" ಎಂದು ಹೇಳಿದ್ದಾರೆ.
"ಪಾಕ್ ಆಕ್ರಮಿತ ಕಾಶ್ಮೀರ ಮುಂದೊಂದು ದಿನ ಈ ಭಾಗಕ್ಕೆ ಸೇರುತ್ತದೆ. ಮುಂದಿನ ವರ್ಷಗಳಲ್ಲಿ ನಾವು ಸಂಪೂರ್ಣ ಕಾಶ್ಮೀರವನ್ನು ಹೊಂದುತ್ತೇವೆ ಎನ್ನುವ ನಂಬಿಕೆ ನನಗಿದೆ" ಎಂದು ತಿಳಿಸಿದ್ದಾರೆ.
"ಡ್ರೋನ್ಗಳನ್ನು ಎದುರಿಸಲು ಅವಶ್ಯವಾದ ಸಲಕರಣೆಗಳನ್ನು ಸಿದ್ದಪಡಿಸಿಕೊಂಡಿದ್ದೇವೆ. ಡ್ರೋನ್ ದಾಳಿಗಿಂತ ಹೆಚ್ಚಿನ ಹಾನಿ ಮಾಡಲು ಆಗುವುದಿಲ್ಲ. ಇದನ್ನು ಮುಂದಿನ ದಿನಗಳಲ್ಲಿ ಸಮರ್ಥವಾಗಿ ನಿರ್ವಹಿಸುತ್ತೇವೆ" ಎಂದು ಹೇಳಿದ್ದಾರೆ.