ಮುಂಬೈ, 28 (DaijiworldNews/MS): ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಆರೋಪಿಯಾಗಿರುವ ಮುಂಬೈ ಕ್ರೂಸ್ ಹಡಗಿನಲ್ಲಿ ಡ್ರಗ್ ಕೇಸಿಗೆ ಸಂಬಂಧಪಟ್ಟಂತೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ ಸಿಬಿ)ದ ಸಾಕ್ಷಿ ಕಿರಣ್ ಗೋಸಾವಿಯನ್ನು ಗುರುವಾರ ಪುಣೆಯಲ್ಲಿ ಬಂಧಿಸಲಾಗಿದೆ.
ಕೆಲ ಸಮಯದಿಂದ ತಲೆ ಮರೆಸಿಕೊಂಡಿದ್ದ ಗೋಸಾವಿಯನ್ನು ಲಕ್ನೋದ ಪೊಲೀಸ್ ಠಾಣೆಯಲ್ಲಿ ಶರಣಾಗುವುದಾಗಿ ಹೇಳಿಕೊಂಡ ಮೂರು ದಿನಗಳ ನಂತರ ಆತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಐಷಾರಾಮಿ ಹಡಗಿನ ಮೇಲಿನ ದಾಳಿ ಸಂದರ್ಭದಲ್ಲಿ ಎನ್ಸಿಬಿಗೆ ಸಂಬಂಧವೇ ಇಲ್ಲದ ವ್ಯಕ್ತಿಗಳು ಕೂಡ ಹಾಜರಿದ್ದರು. ಆ ಪೈಕಿ ಪ್ರಮುಖವಾಗಿ ಕೇಳಿಬಂದ ಹೆಸರು ಕಿರಣ್ ಗೋಸಾವಿ. ಆರ್ಯನ್ ಖಾನ್ ಸಿಕ್ಕಿಬಿದ್ದಾಗ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಕಿರಣ್ ಗೋಸಾವಿ ಸುದ್ದಿಯಾಗಿದ್ದರು. ಆರ್ಯನ್ ಖಾನ್ ಬಂಧನದ ಬಗ್ಗೆ ಅನುಮಾನ ಮೂಡುತ್ತಿದ್ದಂತೆಯೇ ಕಿರಣ್ ಗೋಸಾವಿ ನಾಪತ್ತೆ ಆಗಿದ್ದರು. ಅವರಿಗೂ ಎನ್ಸಿಬಿಗೂ ಯಾವುದೇ ಸಂಬಂಧ ಇಲ್ಲ ಎಂದು ಎನ್ಸಿಬಿ ಕಡೆಯಿಂದಲೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಾಗಿತ್ತು.
ಕಿರಣ್ ಗೋಸಾವಿ ನಾಪತ್ತೆ ಆದ ಬಳಿಕ ಅವರ ಬಾಡಿಗಾರ್ಡ್ ಪ್ರಭಾಕರ್ ಸೈಲ್ ಕೆಲವು ಗಂಭೀರ ಆರೋಪ ಮಾಡಿದ್ದರು. ಎನ್ಸಿಬಿ ಅಧಿಕಾರಿಗಳು ಖಾಲಿ ಹಾಳೆ ಮೇಲೆ ಸಹಿ ಮಾಡಿಸಿಕೊಂಡರು. ಬಹುಕೋಟಿ ಡೀಲ್ ನಡೆದಿದೆ. ತಮ್ಮ ಮೇಲೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದರು.
ಇನ್ನು ಗೋಸಾವಿ ಓರ್ವ ಖಾಸಗಿ ಡಿಟೆಕ್ಟೀವ್ ಎಂದು ಹೇಳಲಾಗಿದೆ. ಅವರ ವಿರುದ್ಧ ಹಲವು ಕೇಸ್ಗಳು ಇವೆ. ಅನೇಕರಿಗೆ ಮೋಸ ಮಾಡಿ ಎಸ್ಕೇಪ್ ಆಗಿರುವ ಬಗ್ಗೆ ದೂರುಗಳು ದಾಖಲಾಗಿದ್ದವು