ಲಕ್ನೋ, ಅ.28 (DaijiworldNews/HR): ಟಿ-20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡ ಗೆಲುವು ಕುರಿತು ಇದು ಪಾಕಿಸ್ತಾನದ ಗೆಲುವಲ್ಲ, ಇಸ್ಲಾಮಿನ ಗೆಲುವು ಎಂದು ಪಾಕಿಸ್ತಾನ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿಕೆಗೆ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಓವೈಸಿ, "ಪಾಕಿಸ್ತಾನದ ಗೆಲುವು ಇಸ್ಲಾಮಿನ ಗೆಲುವು ಎಂದು ಪಾಕ್ ಸಚಿವರು ಹೇಳಿಕೆ ನೀಡಿದ್ದಾರೆ. ಇಸ್ಲಾಂ ಧರ್ಮಕ್ಕೂ ಕ್ರಿಕೆಟ್ ಪಂದ್ಯಗಳಿಗೂ ಏನು ಸಂಬಂಧ? ಭಾರತದ ವಿಚಾರದಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡಬಾರದು" ಎಂದಿದ್ದಾರೆ.
ಇನ್ನು ಎನ್ಆರ್ಸಿ ಮತ್ತು ಸಿಎಎ ವಿರುದ್ಧ ಮುಸ್ಲಿಮರು ನಡೆಸುತ್ತಿರುವ ಪ್ರತಿಭಟನೆ ಒಳ್ಳೆಯದು. ಈ ಕಪ್ಪು ಕಾನೂನುಗಳ ಪ್ರತಿಗಳನ್ನ ಸಂಸತ್ತಿನಲ್ಲಿ ನಾನೇ ಹರಿದು ಹಾಕಿದ್ದೇನೆ ಎಂದರು.
ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತ ವಿರುದ್ಧ ಬಾಬರ್ ನೇತೃತ್ವದ ಪಾಕ್ ತಂಡದ ಗೆಲುವನ್ನು ಜಮ್ಮು ಮತ್ತು ಕಾಶ್ಮೀರದ ಕೆಲವೆಡೆ ಸಂಭ್ರಮಿಸಲಾಗಿದ್ದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಗೂ ಫೋಟೋಗಳನ್ನು ಅಪ್ ಲೋಡ್ ಮಾಡಿರುವ ಬಗ್ಗೆ ವರದಿಯಾಗಿದ್ದು, ಈ ಸಂಭ್ರಮವನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸಮರ್ಥನೆ ಮಾಡಿಕೊಂಡಿದ್ದಾರೆ.