ಮಲಪ್ಪುರಂ, ಅ.28 (DaijiworldNews/PY): 17 ವರ್ಷದ ಬಾಲಕಿಯೊಬ್ಬಳು ಯೂಟ್ಯೂಬ್ ವಿಡಿಯೋಗಳ ಸಹಾಯದಿಂದ ಸ್ವಯಂ ಹೆರಿಗೆ ಮಾಡಿಕೊಂಡ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.
ಅಕ್ಟೋಬರ್ 20ರಂದು ಹುಡುಗಿ ಮಗುವಿಗೆ ಜನ್ಮ ನೀಡಿದ್ದು, ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಮಗುವಿಗೆ ಜನ್ಮ ನೀಡಿದ್ದಾಳೆ. ಸಂಪೂರ್ಣ ಹೆರಿಗೆ ಪ್ರಕ್ರಿಯೆಯನ್ನು ಹುಡುಗಿ ಯಾವುದೇ ಹೊರಗಿನವರ ಸಹಾಯ ಪಡೆಯದೇ ತಾನೇ ಮಾಡಿಕೊಂಡಿದ್ದಾಳೆ ಎನ್ನುವ ವಿಚಾರ ತನಿಖೆ ವೇಳೆ ಪೊಲೀಸರಿಗೆ ತಿಳಿದುಬಂದಿದೆ.
ಸದ್ಯ ಮಂಜೇರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತಾಯಿ ಹಾಗೂ ಮಗುವನ್ನು ದಾಖಲಿಸಲಾಗಿದ್ದು, ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೇ, ಆಕೆಯನ್ನು ಗರ್ಭಿಣಿ ಮಾಡಿದ 21 ವರ್ಷದ ಯುವಕನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಅ.22ರಂದು ಮಗು ಅಳುವ ಶಬ್ದ ಕೇಳಿ ಪೋಷಕರಿಗೆ ಘಟನೆ ಬಗ್ಗೆ ತಿಳಿದುಬಂದಿದೆ. ಮಗುವಿಗೆ ಜನ್ಮ ನೀಡಿದ ಹುಡುಗಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದ ಬಗ್ಗೆ ಪೊಲೀಸರಿಗೆ ಪೋಷಕರು ತಿಳಿಸಿದ್ದಾರೆ.
"ಹುಡುಗಿಯ ತಾಯಿ ದೃಷ್ಟಿಹೀನರಾಗಿದ್ದಾರೆ. ತಂದೆ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಅವರ ತಂದೆ ಯಾವಾಗಲೂ ರಾತ್ರಿ ಕರ್ತವ್ಯದಲ್ಲಿರುತ್ತಿದ್ದರು. ಹುಡುಗಿ ಮೊಬೈಲ್ ಫೋನ್ನೊಂದಿಗೆ ಕೋಣೆಯಲ್ಲೇ ಇರುತ್ತಿದ್ದಳು. ಹಾಗಾಗಿ ಆಕೆ ಆನ್ಲೈನ್ ಕ್ಲಾಸ್ನಲ್ಲಿ ನಿರತಳಾಗಿದ್ದಾಳೆ ಎಂದು ಆಕೆಯ ತಾಯಿ ಭಾವಿಸಿದ್ದರು" ಎಂದು ಸಿಡಬ್ಲ್ಯುಸಿ ಅಧ್ಯಕ್ಷರು ಹೇಳಿದ್ದಾರೆ.