ಲಕ್ನೋ, ಅ.28 (DaijiworldNews/PY): ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ದ ಭಾರತ ಸೋತ ಬಳಿಕ ಪಾಕ್ ಜಯದ ಸಂಭ್ರಮಾಚರಣೆ ನಡೆಸುವ ಕುರಿತು ವರದಿಯಾಗುತ್ತಿದ್ದು, ಈ ರೀತಿಯ ವರ್ತನೆಗಳ ವಿರುದ್ದ ದೇಶದ್ರೋಹ ಕಾನೂನು ಪ್ರಯೋಗಿಸುವ ಎಚ್ಚರಿಕೆಯನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಪಾಕಿಸ್ತಾನದ ಜಯ ಸಂಭ್ರಮಿಸಿದರೆ ದೇಶದ್ರೋಹ ಪ್ರಕರಣ ದಾಖಲಿಸಲಾಗುತ್ತದೆ" ಎಂದು ತಿಳಿಸಿದ್ದಾರೆ.
"ಅ.24ರ ಪಂದ್ಯದ ಬಳಿಕ ಭಾರತದ ವಿರುದ್ದ ಟೀಕೆ ಮಾಡಿದ್ದಕ್ಕಾಗಿ ಬದೌನ್ ಸೇರಿದಂತೆ ಆಗ್ರಾ, ಬರೇಲಿ ಹಾಗೂ ಸೀತಾಪುರ ಜಿಲ್ಲೆಗಳಲ್ಲಿ ಐದು ಪ್ರಕರಣಗಳಲ್ಲಿ 7 ಮಂದಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ" ಎಂದು ಉತ್ತರಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ.
ಕ್ರಿಕೆಟ್ ಪಂದ್ಯಾವಳಿಯ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು ಪೋಸ್ಟ್ ಮಾಡಿದ ಆರೋಪದ ಮೇರೆಗೆ ಹಾಗೂ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪದ ಮೇರೆಗೆ ರಾಜಸ್ಥಾನದ ಉದಯಪುರದ ಖಾಸಗಿ ಶಾಲೆಯ ಶಿಕ್ಷಕ ಹಾಗೂ ಉತ್ತರಪ್ರದೇಶದ ಆಗ್ರಾದಲ್ಲಿ ಓದುತ್ತಿರುವ ಕಾಶ್ಮೀರದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.