ಬೆಂಗಳೂರು, ಅ.24 (DaijiworldNews/PY): "ನನ್ನ ಕೊನೆ ಉಸಿರಿರುವವರೆಗೂ ನಾನು ಮಂಡ್ಯ ಜನರ ಪ್ರೀತಿ ಮರೆಯಲ್ಲ. ಅವರೊಂದಿಗೆ ಇರುತ್ತೇನೆ" ಎಂದು ನಟ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನ ದಾಸರಹಳ್ಳಿಯಲ್ಲಿ ಮಾತನಾಡಿದ ಅವರು, "ಪ್ರತಿಯೋರ್ವರು ಎಡವಿದಾಗಲೇ ಅರಿವಾಗುತ್ತದೆ. ಸೋಲೆ ಗೆಲುವಿನ ಮೆಟ್ಟಿಲು. ನಾನು ಮಣ್ಣಾಗುವವರೆಗೂ ನಾನು ಮಂಡ್ಯ ಜನರ ಪ್ರೀತಿ ಮರೆಯುವುದಿಲ್ಲ. ಕೊನೆ ಉಸಿರಿರುವವರೆಗೂ ಅವರೊಂದಿಗೆ ಇರುತ್ತೇನೆ. ಮಂಡ್ಯ ಹಾಗೂ ರಾಮನಗರದಿಂದ ಕಣಕ್ಕಿಳಿಯುವಂತೆ ಒತ್ತಾಯ ಕೇಳಿಬರುತ್ತಿದೆ" ಎಂದಿದ್ದಾರೆ.
ಮಂಡ್ಯ ಲೋಕಸಭಾ ಚುನಾವಣೆ ಸೋಲಿನ ಕುರಿತು ಮಾತನಾಡಿದ ಅವರು, "ಈ ಸಂದರ್ಭ ನಾನು ಎಂಪಿ ಚುನಾವಣೆಗೆ ಅನಿವಾರ್ಯವಾಗಿ ನಿಲ್ಲಬೇಕಾಯಿತು. ಮಂಡ್ಯ ಚುನಾವಣೆಗೆ ಸ್ಪರ್ಧಿಸುವ ಯೋಚನೆ ಇರಲಿಲ್ಲ. ಜಿಲ್ಲೆಯ ಎಲ್ಲಾ ಶಾಸಕರು ಒತ್ತಾಯ ಮಾಡಿದ ಕಾರಣ ಸ್ಪರ್ಧಿಸಿದೆ. ಇದು ನನ್ನೊಬ್ಬನ ಸೋಲಲ್ಲ. ಬದಲಾಗಿ ಜೆಡಿಎಸ್ ಪಕ್ಷದ ಲಕ್ಷಾಂತರ ಕಾರ್ಯಕರ್ತರ ಸೋಲು" ಎಂದು ತಿಳಿಸಿದ್ದಾರೆ.