ಬೆಂಗಳೂರು, ಅ.24 (DaijiworldNews/PY): 'ಪ್ರೈಸ್ ಹೈಕ್' ದೇಶವಾಸಿಗಳ ಮೇಲೆ ಬಿಜೆಪಿ ನಡೆಸುತ್ತಿರುವ ದಿನನಿತ್ಯದ 'ಸರ್ಜಿಕಲ್ ಸ್ಟ್ರೈಕ್'! ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಪ್ರೈಸ್ ಹೈಕ್' ದೇಶವಾಸಿಗಳ ಮೇಲೆ ಬಿಜೆಪಿ ನಡೆಸುತ್ತಿರುವ ದಿನನಿತ್ಯದ 'ಸರ್ಜಿಕಲ್ ಸ್ಟ್ರೈಕ್'! ಪೆಟ್ರೋಲ್, ಡೀಸೆಲ್ ಬೆಲೆ ಯಶಸ್ವಿಯಾಗಿ ಶತಕ ದಾಟಿ ದ್ವಿಶತಕದತ್ತ ಮುನ್ನುಗ್ಗುತ್ತಿದೆ. 14 ವರ್ಷಗಳಲ್ಲಿ ಮೊದಲ ಬಾರಿ ಬೆಂಕಿಪೊಟ್ಟಣಗಳ ಬೆಲೆ ದ್ವಿಗುಣಗೊಂಡಿದೆ. ಅಡುಗೆ ಅನಿಲದ ಬೆಲೆ ₹1000 ಗಡಿಯಲ್ಲಿದೆ ಎಂದು ಕಿಡಿಕಾರಿದೆ.
"ಆತುರದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೊಳಿಸಿ ಶಿಕ್ಷಣ ವ್ಯವಸ್ಥೆಯನ್ನೇ ದಿಕ್ಕು ತಪ್ಪಿಸಿದ ರಾಜ್ಯ ಸರ್ಕಾರ, ಶಾಲೆಗಳಲ್ಲಿ ಶಿಕ್ಷಕರ ಕೊರತೆ, ವಿಶ್ವವಿದ್ಯಾಲಯಗಳಲ್ಲಿ ಬೋಧಕರ ಕೊರತೆ, ಶಿಕ್ಷಕರ ಅಸಹಕಾರ ಸತ್ಯಾಗ್ರಹ, ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರ ಗೊಂದಲ. ರಾಜಕೀಯ ಲಾಭಕ್ಕೆ ವಿದ್ಯಾರ್ಥಿಗಳ ಭವಿಷ್ಯವನ್ನೇ ಬಿಜೆಪಿ ಬಲಿಕೊಡುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕೊರೊನಾ ಕಾರಣದಿಂದ ಸುಮಾರು 20 ತಿಂಗಳು ಮುಚ್ಚಲಾಗಿದ್ದ 1ರಿಂದ 5ನೇ ತರಗತಿ ಶಾಲೆಗಳು ತೆರೆಯಲಿದ್ದು ನಾಳೆಯಿಂದ ರಾಜ್ಯಾದ್ಯಂತ ತರಗತಿ ಆರಂಭವಾಗುತ್ತಿವೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿರುವುದರಿಂದ ಭೌತಿಕ ತರಗತಿ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಹೀಗಾಗಿ ಮಕ್ಕಳು ಕೂಡಾ ಶಾಲೆಗೆ ಹೋಗಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.