ನವದೆಹಲಿ, ಅ 24 (DaijiworldNews/MS): ಮಾದಕವಸ್ತು ಹಗರಣದಲ್ಲಿ ಬಾಲಿವುಡ್ ನಟ ಶಾರುಖ್ಖಾನ್ ಪುತ್ರ ಆರ್ಯನ್ ಖಾನ್ ಪ್ರಕರಣಕ್ಕೆ ಸಂಬಂಧಿಸಿದ ಒಂದು ಪ್ರಮುಖ ಬೆಳವಣಿಗೆಯಲ್ಲಿ ಹೊಸ ತಿರುವು ದೊರಕಿದೆ.
ಆರ್ಯನ್ ಖಾನ್ ಡ್ರಗ್ ಪ್ರಕರಣದಲ್ಲಿ 18 ಕೋಟಿ ರೂ.ಗಳ ಡೀಲ್ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು ಪ್ರಕರಣದ ಸಾಕ್ಷಿಯಾಗಿರುವ ಪ್ರಭಾಕರ್ ಸಾಲಿ ಎಂಬಾತ ಹೊಸ ಆರೋಪ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ದಳ(ಎನ್ಸಿಬಿ) ಅದಿಕಾರಿ ಸಮೀರ್ ವಾಖಡೆ ವಿರುದ್ದ ಮಹಾರಾಷ್ಟ್ರದ ಸಚಿವರೊಬ್ಬರು ಗಂಭೀರ ಆರೋಪ ಮಾಡಿದ್ದರು.
ಈಗ ಪ್ರಭಾಕರ್ ಸಾಲಿ ಎಂಬುವರು ಹೊಸ ಆರೋಪ ಮಾಡಿದ್ದು, ಖಾಸಗಿ ಪತ್ತೆದಾರ ಕೆ.ಪಿ.ಗೋಸಾವಿ ( ಕಸ್ಟಡಿಯಲ್ಲಿದ್ದ ಆರ್ಯನ್ ಖಾನ್ ಜೊತೆ ಸೆಲ್ಫಿ ತೆಗೆದು ವೈರಲ್ ಆಗಿದ್ದ ವ್ಯಕ್ತಿ) ಮತ್ತು ಸ್ಯಾಮ್ ಡಿಸೋಜ ಎಂಬುವರ ನಡುವೆ 18 ಕೋಟಿ ರೂ.ಗಳ ಡೀಲ್ ನಡೆದಿದೆ. ಅದರಲ್ಲಿ 8 ಕೋಟಿ ರೂ.ಗಳನ್ನು ಸಮೀರ್ ವಾಖಡೆ ಅವರಿಗೆ ನೀಡಲು ಸ್ಯಾಮ್ ಡಿಸೋಜ ಅವರಿಗೆ ಕೊಡಲಾಗಿತ್ತು.ಅಂತಿಮವಾಗಿ ಹಣ ಸಮೀರ್ ಅವರಿಗೆ ತಲುಪಿದೆ ಎಂದು ಹೇಳಿದ್ದಾರೆ.
ಆದರೆ ಈ ಆರೋಪವನ್ನು ಎನ್ಸಿಬಿ ತಳ್ಳಿ ಹಾಕಿದೆ. ಒಂದು ವೇಳೆ ಹಣ ಪಡೆದಿದ್ದೇ ಆಗಿದ್ದರೆ ಆರ್ಯನ್ ಖಾನ್ ಜೈಲಿನಲ್ಲಿ ಇರುತ್ತಿರಲಿಲ್ಲ. ಆಧಾರ ರಹಿತವಾದ ಆರೋಪಗಳನ್ನು ಮಾಡಿ ಎನ್ಸಿಬಿ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಎನ್ಸಿಬಿಯ ಉನ್ನತ ಅಧಿಕಾರಿ ಸಮೀರ್ ವಾಂಖೆಡೆ ಅವರು ಆರೋಪ ನಿರಾಕರಿಸಿದ್ದು ಇದಕ್ಕೆ "ಸೂಕ್ತ ಉತ್ತರ" ನೀಡುವುದಾಗಿ ಹೇಳಿದ್ದಾರೆ
ಆರ್ಯನ್ ಖಾನ್ ನನ್ನು ಅಕ್ಟೋಬರ್ 3 ರಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿತ್ತು.