ಮೈಸೂರು, ಅ.24 (DaijiworldNews/PY): "ಬ್ಯಾನರ್ನಲ್ಲಿ ಫೋಟೋ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬಂದಿಲ್ಲ. ಇನ್ನು ಅವರು ಸಿಎಂ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಡುತ್ತಾರಾ?" ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಮ್ಮ ಪಕ್ಷಕ್ಕೆ ಕಾಂಗ್ರೆಸ್ ಜೊತೆ ಮೈತ್ರಿಯಿಂದ ಹಾನಿಯಾಗಿದೆ. ನಮಗೆ ಶಕ್ತಿ ಇದ್ದ ಕಡೆ ಹಿನ್ನಡೆ ಆಗಿದೆ" ಎಂದು ತಿಳಿಸಿದ್ದಾರೆ.
"ರಾಜ್ಯದಲ್ಲಿ ಜೆಡಿಎಸ್ ಅನ್ನು ಮುಗಿಸಲು ಯಾರಿಂದ ಕೂಡಾ ಸಾಧ್ಯವಿಲ್ಲ. ಐದು ದಿನಗಳ ಕಾಲ ಉಪಚುನಾವಣೆಲ್ಲಿ ಪ್ರಚಾರ ಮಾಡಿದ್ದೇನೆ. ಕಾಂಗ್ರೆಸ್ ಸಾಲಮನ್ನಾ ಮಾಡುವುದಕ್ಕೆ ಬೆಂಬಲ ನೀಡಲಿಲ್ಲ. ಭಾಗ್ಯ ಕಾರ್ಯಕ್ರಮಗಳನ್ನು ನಿಲ್ಲಿಸಬಾರದು, ಬಜೆಟ್ ಬೇಡ ಎಂದೆಲ್ಲಾ ಹೇಳಿದ್ದರು" ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
"ಸಿದ್ದರಾಮಯ್ಯ ಅವರು, ಜೆಡಿಎಸ್ ಪಕ್ಷವನ್ನು ಕಟ್ಟಿದ್ದೇನೆ ಎಂದು ಹೇಳುತ್ತಾರೆ. ಆದರೆ, ಅವರು ಬ್ಯಾನರ್ನಲ್ಲಿ ಫೋಟೋ ಇಲ್ಲ ಎಂದು ಕಾರ್ಯಕ್ರಮಕ್ಕೆ ಬಂದಿಲ್ಲ. ಇನ್ನು ಬೇರೆಯವರಿಗೆ ಸಿಎಂ ಸ್ಥಾನವನ್ನು ಬಿಟ್ಟಕೊಡುತ್ತಾರಾ?. ಅವರು ಕಾಲಿನ ಮೇಲೆ ಕಾಲು ಹಾಕಿ ದೇವೇಗೌಡರನ್ನು ಒದ್ದುಕೊಂಡು ಕೂರುತ್ತಿದ್ದರು. ಇವೆಲ್ಲವನ್ನು ನಾನು ನೋಡಿದ್ದೇನೆ" ಎಂದು ಹೇಳಿದ್ದಾರೆ.