ಬೆಳಗಾವಿ, ಅ.24 (DaijiworldNews/PY): "ತೀವ್ರ ಮಳೆ ಹಾಗೂ ಕಲ್ಲಿದ್ದಲಿನ ಆಮದು ದರ ಹೆಚ್ಚಾದ ಕಾರಣ ದೇಶದಲ್ಲಿ ಕಲ್ಲಿದ್ದಲು ಕೊರತೆ ಆಗಿತ್ತು. ಅಪಾರ ಪ್ರಮಾಣದಲ್ಲಿ ಸ್ವದೇಶಿ ಕಲ್ಲಿದ್ದಲನ್ನೇ ಒದಗಿಸಲಾಗುತ್ತಿದೆ. ಇದರಿಂದಾಗಿ ಸಂಪೂರ್ಣ ಕಲ್ಲಿದ್ದಲು ಆಮದನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ" ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಕಿತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೇಶದಲ್ಲಿ ಕಲ್ಲಿದ್ದಲು ಕೊರತೆ ಆಗಿತ್ತು. ನಾವು ಇದನ್ನು ಅವಕಾಶವಾಗಿ ಬಳಸಿಕೊಂಡಿದ್ದೇವೆ. ದೇಶದಲ್ಲಿ ಲಭ್ಯವಿರುವ ಕಲ್ಲಿದ್ದಲನ್ನೇ ಅಪಾರ ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತಿದೆ" ಎಂದಿದ್ದಾರೆ.
"ನಮ್ಮ ಸರ್ಕಾರ ಕಿತ್ತೂರು ಕೋಟೆಯನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಣೆ ಮಾಡಲು ಬದ್ಧವಿದೆ. ಈ ಸರ್ಕಾರದ ಅವಧಿಯಲ್ಲೇ ಧಾರವಾಡ-ಬೆಳಗಾವಿ ರೈಲು ಯೋಜನೆ ಮುಗಿಯಬೇಕು ಎನ್ನುವುದು ನನ್ನ ಆಶಯ. ಕೂಡಲೇ ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು" ಎಂದು ಹೇಳಿದ್ದಾರೆ.
"ಕಿತ್ತೂರಿನಲ್ಲಿ ಅಂತರಾಷ್ಟ್ರೀಯ ವಿಮಾಣ ನಿಲ್ದಾಣ ನಿರ್ಮಾಣಕ್ಕೆ ಬೇಡಿಕೆ ಇದೆ. ರಾಜ್ಯ ಸರ್ಕಾರ ಭೂಮಿ ಒದಗಿಸಿದ್ದಲ್ಲಿ ಕ್ರಮ ಕೈಗೊಳ್ಳುತ್ತೇವೆ. ಇಲ್ಲಿಗೆ ವಿಮಾನಗಳ ದುರಸ್ತಿ ಹಾಗೂ ನಿಲುಗಡೆ ವ್ಯವಸ್ಥೆಗೂ ಕೂಡಾ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತೇವೆ" ಎಂದಿದ್ದಾರೆ.