ನವದೆಹಲಿ, ಅ 24 (DaijiworldNews/MS): ಪೇಜಾವರದ ವಿಶ್ವೇಶತೀರ್ಥ ಶ್ರೀಗಳಿಗೆ ಕೇಂದ್ರ ಸರ್ಕಾರವು ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಈ ಕುರಿತು ಭಾನುವಾರ ಬೆಳಿಗ್ಗೆ ಟ್ವೀಟ್ ಮಾಡಿರುವ ಅವರು, 'ಪರಮಪೂಜ್ಯ ಉಡುಪಿ ಅಧೋಕ್ಷಜ ಮಠದ ಪೀಠಾಧಿಪತಿಗಳಾಗಿ ನಮ್ಮೆಲ್ಲರಿಗೂ ಹಲವಾರು ವರ್ಷಗಳ ಕಾಲ ನಿರಂತರ ಮಾರ್ಗದರ್ಶನ ಮಾಡಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಭಾರತ ಸರ್ಕಾರ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿದೆ. ಇದು ಕನ್ನಡಿಗರಾದ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ' ಎಂದು ಹೇಳಿದ್ದಾರೆ.
ಇನ್ನು ನವೆಂಬರ್ 8ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ನಾಡು ಕಂಡ ಶ್ರೇಷ್ಠ ಸಂತ, ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರಿಗೂ ಪದ್ಮವಿಭೂಷಣ ಪ್ರಶಸ್ತಿ (ಮರಣೋತ್ತರ) ಪ್ರದಾನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲು ಪೇಜಾವರ ಕಿರಿಯ ಶ್ರೀಗಳಾದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಭಾಗವಹಿಸಲಿದ್ದಾರೆ.