ವಿಜಯಪುರ, ಅ.24 (DaijiworldNews/PY): "ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಅಭಿವೃದ್ಧಿಯ ಮುಖೇನ ನಿಮ್ಮ ಮುಂದೆ ಬಂದು ನಿಲ್ಲಲಿದ್ದೇವೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಭಾನುವಾರ ಸಿಂದಗಿ ಕ್ಷೇತ್ರದ ಕನ್ನೋಳಿ ಗ್ರಾಮದಲ್ಲಿ ರೋಡ್ ಶೋ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, "ನಮ್ಮ ಅಭ್ಯರ್ಥಿಗಳ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನಮ್ಮ ನಾಯಕರಾದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಸರ್ಕಾರದ ಸಾಧನೆಗಳೇ ಸಹಕಾರಿಯಾಗಲಿದೆ" ಎಂದಿದ್ದಾರೆ.
"ಕೈ ನಾಯಕರು ಏನೂ ಕೆಲಸ ಮಾಡದ ಕಾರಣ ಅವರು ವಿಷಯ ಇಲ್ಲದೇ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ಅಧಿಕಾರ ಸಿಕ್ಕಾಗ ಸ್ವಾರ್ಥ ರಾಜಕಾರಣ ಮಾಡಿದ್ದೇ ಜಾಸ್ತಿ" ಎಂದು ಆರೋಪಿಸಿದ್ದಾರೆ.
"ನಾನು ಅಧಿಕಾರ ಸ್ವೀಕರಿಸಿದ ವೇಳೆ ರೈತರ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಕ್ಕಾಗಿ 20 ಲಕ್ಷ ಫಲಾನುಭವಿ 1 ಸಾವಿರ ಕೋಟಿ ರೂ. ಯೋಜನೆ ಘೋಷಣೆ ಮಾಡಿದ್ದೇನೆ" ಎಂದು ತಿಳಿಸಿದ್ದಾರೆ.
"ಈ ಹಿಂದಿನ ಚುನಾವಣೆಯ ವೇಳೆ ಕೈ ನಾಯಕರು ಸೋತು ಬಿಜೆಪಿ ಹಣಬಲ, ತೋಳ್ಬಲದ ಅಧಿಕಾರದಿಂದ ಬಿಜೆಪಿ ಜಯ ಗಳಿಸಿದೆ ಎಂದು ದೂರಿದ್ದರು. ಆದರೆ, ಹಾನಗಲ್ ಹಾಗೂ ಸಿಂದಗಿ ಚುನಾವಣೆಯ ಪೂರ್ವದಲ್ಲೇ ಕಾಂಗ್ರೆಸ್ ನಾಯಕರು ಹಣಬಲ, ತೋಳ್ಬಲದ ಬಗ್ಗೆ ಮಾತನಾಡುತ್ತಿದ್ದು ಸೋಲುವ ಭೀತಿಯಿಂದ ಹತಾಶೆಯ ಹೇಳಿಕೆ ನೀಡುತ್ತಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ.
"ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭ ಕುಂದಗೋಳ, ನಂಜನಗೂಡು ಉಪಚುನಾವಣೆಯಲ್ಲಿ ಗೋಣಿಚೀಲದಲ್ಲಿ ಹಣ ತಂದು ಹಂಚಿ ಗೆಲುವು ಸಾಧಿಸಿದ್ದರು. ಪ್ರಸ್ತುತ ಕಾಂಗ್ರೆಸ್ ನಾಯಕರು ತಮ್ಮ ಅನುಭವವನ್ನೇ ಗೋಣಿ ಚೀಲದಲ್ಲಿ ಹಣ ತಂದು ಹಂಚುತ್ತಿದ್ದಾರೆ ಎಂದು ಹಂಬಲಿಸುತ್ತಿದ್ದಾರೆ" ಎಂದಿದ್ದಾರೆ.
"ಶೀಘ್ರದಲ್ಲೇ ಕಾರವಾರ ಏತ ನೀರಾವರಿಗೆ ಟೆಂಡರ್ ಕರೆಯಲಾಗುತ್ತದೆ. ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ" ಎಂದು ತಿಳಿಸಿದ್ದಾರೆ.
"ಸಿಂದಗಿ ಕ್ಷೇತ್ರಕ್ಕೆ 5,000 ಮನೆ ಮಂಜೂರು ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಸಿಂದಗಿ ಕ್ಷೇತ್ರ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣಲಿದೆ" ಎಂದು ಹೇಳಿದ್ದಾರೆ.