ಲಕ್ನೋ, ಅ.24 (DaijiworldNews/PY): ಮಹಿಳೆಯರು ಕತ್ತಲಾದ ಮೇಲೆ ಪೊಲೀಸ್ ಠಾಣೆಗೆ ಹೋಗದಂತೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಬೇಬಿ ರಾಣಿ ಮೌರ್ಯ ಹೇಳಿದ್ದಾರೆ.
ಪಕ್ಷಕ್ಕೆ ಈ ಹೇಳಿಕೆಯಿಂದ ಮುಜುಗರ ಉಂಟಾಗಿದ್ದು, ಇದರ ಜೊತೆ ಉತ್ತರ ಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ.
ವಾರಣಾಸಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಗಳು ಇರುತ್ತಾರೆ. ಆದರೂ, ಮಹಿಳೆಯರು ಸಂಜೆ ಐದರ ಬಳಿಕ ಪೊಲೀಸ್ ಠಾಣೆಗೆ ಹೋಗುವುದು ಸೂಕ್ತವಲ್ಲ. ಅವರಿಗೆ ಪೊಲೀಸ್ ಠಾಣೆಗೆ ಹೋಗಲೇಬೇಕೆಂದಿದ್ದರೆ ಅಪ್ಪ, ಅಣ್ಣ, ಪತಿ ಅಥವಾ ಯಾರನ್ನಾದರೂ ಕರೆದುಕೊಂಡು ಹೋಗಿ" ಎಂದಿದ್ದಾರೆ.
"ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶ ಸರ್ಕಾರ ಮಹಿಳೆಯರ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ, ಕಳೆದ ಕೆಲವು ವರ್ಷಗಳಿಂದ ಪರಿಸ್ಥಿತಿ ಬದಲಾಗಿದೆ" ಎಂದು ಹೇಳಿದ್ದಾರೆ.
"ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎನ್ನುವುದನ್ನು ನಾವು ಹೇಳುತ್ತಲೇ ಬಂದಿದ್ದೇವೆ. ಮಹಿಳೆಯರಿಗೆ ಪೊಲೀಸ್ ಠಾಣೆಗಳಲ್ಲಿ ಕೂಡಾ ಸುರಕ್ಷತೆ ಇಲ್ಲ ಎನ್ನುವುದನ್ನು ನಾವು ಹಲವಾರು ಬಾರಿ ಹೇಳಿದ್ದೇವೆ. ನಮ್ಮ ಆರೋಪಗಳಿಗೆ ಬೇಬಿ ರಾಣಿ ಮೌರ್ಯ ಅವರ ಹೇಳಿಕೆ ಬಲ ನೀಡಿವೆ" ಎಂದು ಸಮಾಜವಾದಿ ಪಕ್ಷದ ನಾಯಕರೋರ್ವ ತಿಳಿಸಿದ್ದಾರೆ.