ಲಕ್ನೋ, ಅ 24 (DaijiworldNews/MS): ಲಿಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದ ಮುಖ್ಯ ಆರೋಪಿ, ಕೇಂದ್ರ ಸಚಿವ ಅಜಯ್ ಮಿಶ್ರಾ ತೇಣಿ ಅವರ ಪುತ್ರ ಆಶಿಶ್ ಮಿಶ್ರಾ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಅವರನ್ನು ಜೈಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಕಳೆದ ಶುಕ್ರವಾರ ಜ್ವರದಿಂದ ಬಳಲುತ್ತಿರುವುದಾಗಿ ಮಿಶ್ರಾ ಹೇಳಿದ್ದರು. ಆ ಬಳಿಕ ಅವರ ರಕ್ತದ ತಪಾಸಣೆ ನಡೆಸಿದಾಗ ಡೆಂಗ್ಯೂವಿನಿಂದ ಬಳಲುತ್ತಿರುವುದು ಖಾತ್ರಿಯಾಗಿದೆ. ಹೀಗಾಗಿ ಶನಿವಾರ ರಾತ್ರಿ 10 ಗಂಟೆಯ ಸುಮಾರಿಗೆ ಅವರನ್ನು ಜೈಲಾಸ್ಪತ್ರೆಗೆ ಸೇರಿಸಲಾಗಿದೆ.
ಆಶಿಶ್ ಮಿಶ್ರಾ ಅವರ ಮಾದರಿಯನ್ನು ಡೆಂಗ್ಯೂ ದೃಢೀಕರಣಕ್ಕಾಗಿ ಲಕ್ನೋದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಹಿರಿಯ ಜೈಲು ಅಧಿಕಾರಿಯನ್ನು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಲಖಿಂಪುರ್ ಖೇರಿ ಎಂಬಲ್ಲಿನ ಟಿಕುನಿಯ ಪ್ರದೇಶದಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಆಶಿಶ್ ಮಿಶ್ರಾ ಅವರು ಕಾರು ಹರಿಸಿದ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಈ ಘಟನೆಯಲ್ಲಿ ನಾಲ್ವರು ರೈತರು ಅಸುನೀಗಿದ್ದರು. ರಾಷ್ಟ್ರವ್ಯಾಪಿ ಸಂಚಲನಕ್ಕೆ ಕಾರಣವಾದ ಪ್ರಕರಣದ ಬಳಿಕ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಆಶಿಶ್ ಮಿಶ್ರಾ ಸೇರಿದಂತೆ ಹದಿಮೂರು ಜನರನ್ನು ಇಲ್ಲಿಯವರೆಗೆ ಬಂಧಿಸಲಾಗಿದೆ.