ಶ್ರೀನಗರ, ಅ.24 (DaijiworldNews/PY): "ವಿಧಾನಸಭಾ ಚುನಾವಣೆಗಳು ಪೂರ್ಣಗೊಂಡ ನಂತರ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪನೆ ಮಾಡಲಾಗುವುದು" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ಮೂರು ದಿನಗಳ ಭೇಟಿಗಾಗಿ ಶನಿವಾರ ಶ್ರೀನಗರಕ್ಕೆ ಆಗಮಿಸಿರುವ ಅವರು, ಯೂತ್ ಕ್ಲಬ್ನ ಸದಸ್ಯರೊಂದಿಗಿನ ಸಂವಾದದಲ್ಲಿ ಈ ಭರವಸೆ ನೀಡಿದ್ದಾರೆ.
"ಕಾಶ್ಮೀರದಲ್ಲಿ ಶಾಂತಿ ಹಾಗೂ ಅಭಿವೃದ್ದಿಯ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸಲು ಸರ್ಕಾರ ಯಾರಿಗೂ ಅವಕಾಶ ನೀಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸರ್ಕಾರದೊಂದಿಗೆ ಕೈಜೋಡಿಸಿ" ಎಂದು ಕರೆ ನೀಡಿದ್ದಾರೆ.
"ಪ್ರಧಾನಿ ಮೋದಿ ಅವರ ಶಾಂತಿಯುತ ಹಾಗೂ ಅಭಿವೃದ್ದಿ ಹೊಂದಿದ ಕಣಿವೆ ನಿರ್ಮಾಣದ ಕನಸನ್ನು ಸಾಕಾರಗೊಳಿಸುವ ಸಲುವಾಗಿ ಕಾಶ್ಮೀರದ ಯುವಕರು ಕೈಜೋಡಿಸಬೇಕು" ಎಂದು ಮನವಿ ಮಾಡಿದ್ದಾರೆ.