ನವದೆಹಲಿ, ಅ 24 (DaijiworldNews/MS): ಯಾರಾದರೂ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಸ್ವೀಕರಿಸಲು ಬಯಸುತ್ತಿದ್ದರೆ ಅಂತಹವರಿಗೆ ಕಾಂಗ್ರೆಸ್ ಪಕ್ಷ ಹೊಸ ನಿಯಮಗಳನ್ನು ವಿಧಿಸಿದೆ. ಹೌದು.. ಕಾಂಗ್ರೆಸ್ ತನ್ನ ಹೊಸ ಸದಸ್ಯತ್ವ ನಿಯಮ ರೂಪದಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ತನ್ನ ಹೊಸ ಸದಸ್ಯರಿಗೆ ಮದ್ಯ ಮತ್ತು ಮಾದಕ ದ್ರವ್ಯಗಳಿಂದ ದೂರವಿರಲು ಘೋಷಿಸಿಕೊಳ್ಳಬೇಕಾಗಿದೆ. ಸಾರ್ವಜನಿಕ ವೇದಿಕೆಗಳಲ್ಲಿ ಪಕ್ಷದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಟೀಕಿಸದಂತೆ ಲಿಖಿತ ಭರವಸೆ ನೀಡಬೇಕಾಗಿದೆ.
ಅತ್ಯಂತ ಪುರಾತನ ಪಕ್ಷದ ಸದಸ್ಯತ್ವದ ಅರ್ಜಿಯಲ್ಲಿ ಈ ನಿಬಂಧನೆಗಳನ್ನು ಸದಸ್ಯತ್ವ ಸ್ವೀಕರಿಸುತ್ತಿರುವವರು ಪೂರ್ಣಗೊಳಿಸಬೇಕಿದೆ. ಇವೆಲ್ಲದರ ಜೊತೆಗೆ ಕಾನೂನನ್ನು ಮೀರಿ ಆಸ್ತಿ ಮಾಡುವುದಿಲ್ಲ ಮತ್ತು ಕಾನೂನುಗಳನ್ನು ಮೀರಿ ಯಾವುದೇ ಆಸ್ತಿಯನ್ನು ಹೊಂದಿಲ್ಲ ಎಂದು ಘೋಷಿಸಬೇಕಾಗಿದೆ. ಇದರೊಂದಿಗೆ ಪಕ್ಷದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಮುಂದುವರೆಸಲು 'ದೈಹಿಕ ಶ್ರಮ ಮತ್ತು ಕೆಲಸ'ಗಳನ್ನು ಕೈಗೊಳ್ಳಲು ಹಿಂಜರಿಯಬೇಡಿ ಮುಂತಾದ ಹತ್ತು ಅಂಶಗಳು ಸದಸ್ಯತ್ವ ಅರ್ಜಿಯಲ್ಲಿ ಉಲ್ಲೇಖವಾಗಿದೆ.
ಕಾಂಗ್ರೆಸ್ ಪಕ್ಷ ನವೆಂಬರ್ 1 ರಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿದ್ದು 2022 ರ ಮಾರ್ಚ್ 31 ವರೆಗೂ ಈ ಅಭಿಯಾನ ನಡೆಯಲಿದೆ. ಈ ಬಳಿಕ ಮುಂದಿನ ವರ್ಷ ಆಗಸ್ಟ್ 21 ರಿಂದ ಸೆ.20 ರ ನಡುವೆ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಲ್ಲಾ ಪಕ್ಷದ ಕೇಂದ್ರ ಚುನಾವಣಾ ವಿಭಾಗದ ಅಧ್ಯಕ್ಷರಾದ ಮಧುಸೂಧನ್ ಮಿಸ್ತ್ರಿ " ಕಾಂಗ್ರೆಸ್ ಸದಸ್ಯರು ಹಾಗೂ ಹೊಸ ಸದಸ್ಯರು ಈ ನಿಬಂಧನೆಗಳಿಗೆ ಪೂರಕವಾಗಿ ನಡೆದುಕೊಳ್ಳುವುದನ್ನು ನಿರೀಕ್ಷಿಸುತ್ತೇವೆ" ಎಂದು ಹೇಳಿದ್ದಾರೆ.