ಶ್ರೀನಗರ, ಅ.24 (DaijiworldNews/PY): ಕಾಶ್ಮೀರದಲ್ಲಿ ಸುರಿದ ಭಾರಿ ಮಳೆ ಹಾಗೂ ಹಿಮಪಾತ ಸಂಬಂಧಿತ ಅವಘಡಗಳ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ.
ಭಾರಿ ಮಳೆಯ ಪರಿಣಾಮ ಸೇಬು ತೋಟಗಳಿಗೆ ಅಪಾರ ಹಾನಿಯಾಗಿದೆ. ಶನಿವಾರ ಶ್ರೀನಗರದಲ್ಲಿ ಅಕ್ಟೋಬರ್ ತಿಂಗಳ ಕನಿಷ್ಟ ತಾಪಮಾನ ದಾಖಲಾಗಿದೆ.
"ಮಳೆ ಹಾಗೂ ಹಿಮಪಾತ ಶುಕ್ರವಾರ ರಾತ್ರಿಯೇ ಪ್ರಾರಂಭವಾಗಿತ್ತು. ಭಾರಿ ಮಳೆಯ ಕಾರಣ ಪುಲ್ವಾಮಾದ ಟ್ರಾಲ್ ಪ್ರದೇಶದ ನೂರ್ಪೊರಾದಲ್ಲಿ ಟೆಂಟೊಂದರ ಮೇಲೆ ಭೂಕುಸಿತ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
"ಸೋನಾಮಾರ್ಗ್, ಗುಲ್ಮಾರ್ಗ್, ಶೋಪಿಯಾನ್, ಪಹಲ್ಗಾಂ ಹಾಗೂ ಗ್ರುಯೆಜ್ ಪ್ರದೇಶಗಳಲ್ಲಿ ಸಾಧಾರಣ ಹಿಮಪಾತವಾಗಿದೆ. ಮೀನಾಮಾರ್ಗ್, ಲಾಡಾಖ್ನ ದ್ರಾಸ್ ಪ್ರದೇಶಗಳಲ್ಲಿಯೂ ಶುಕ್ರವಾರದಿಂದ ಹಿಮಪಾತವಾಗುತ್ತಿದೆ" ಎಂದಿದ್ದಾರೆ.
ದಕ್ಷಿಣ ಕಾಶ್ಮೀರದ ಶೋಪಿಯಾನ್ ಹಾಗೂ ಕುಲ್ಗಾಂ ಜಿಲ್ಲೆಗಳಲ್ಲಿ ಸೇಬು ತೋಟಗಳಿಗೆ ಹಾನಿಯಾಗಿದೆ.