ಚೆನ್ನೈ, ಅ 24 (DaijiworldNews/MS): ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಸೇರಿ ಅಗತ್ಯ ವಸ್ತುಗಳು ಗಗನಮುಖಿಯಾಗಿವೆ. ಈ ಮಧ್ಯೆ ಬರೋಬ್ಬರಿ 14 ವರ್ಷಗಳ ನಂತರ ಬೆಂಕಿಪೊಟ್ಟಣದ ದರವನ್ನು ಕೂಡ ಹೆಚ್ಚಳ ಮಾಡಲಾಗುತ್ತಿದೆ.
ಹೌದು ಅಡುಗೆ ಮನೆ ಸೇರಿ ಜನಸಾಮಾನ್ಯರ ದೈನಿಕ ಬದುಕಿನ ಅವಿಭಾಜ್ಯ ಅಂಗಗಳಲ್ಲಿ ಒಂದಾದ ಬೆಂಕಿಪೊಟ್ಟಣದ ಬೆಲೆ ಡಿಸೆಂಬರ್ ತಿಂಗಳಿನಿಂದ ದುಪ್ಪಟ್ಟಾಗಳಿದೆ. ಡಿಸೆಂಬರ್ 1 ರಿಂದ ಜಾರಿಗೆ ಬರುವಂತೆ ಒಂದು ಬೆಂಕಿ ಪೊಟ್ಟಣದ ದರ 2 ರೂ.ಗೆ ಏರಿಕೆಯಾಗಲಿದ್ದು . ಪ್ರಸ್ತುತ 1 ರೂ. ಇರುವ ಮ್ಯಾಚ್ಬಾಕ್ಸ್ ಗಳ ಚಿಲ್ಲರೆ ಬೆಲೆಯನ್ನು ದ್ವಿಗುಣಗೊಳಿಸಲು ಅಂದರೆ 2 ರೂ.ಗೆ ಏರಿಕೆ ಮಾಡಲಾಗುತ್ತಿದೆ. ಇದು ಬರೋಬ್ಬರಿ 14 ವರ್ಷದ ನಂತರ ದರ ಏರಿಕೆ ಮಾಡಲಾಗುತ್ತಿದೆ.
2007ರಲ್ಲಿ ಬೆಂಕಿ ಪೊಟ್ಟಣದ ದರವನ್ನು 50 ಪೈಸೆಗಳಿಂದ 1 ರೂ.ಗೆ ಕೊನೆಯದಾಗಿ ಹೆಚ್ಚಿಸಲಾಗಿತ್ತು. ಇದೀಗ 2 ರೂ.ಗೆ ಹೆಚ್ಚಿಸಲು ಮ್ಯಾಚ್ಬಾಕ್ಸ್ ತಯಾರಿಕಾ ಕಂಪನಿಗಳು ಒಟ್ಟಾಗಿ ನಿರ್ಣಯಿಸಿವೆ. ಬೆಲೆ ಏರಿಕೆಯ ಹೊಡೆತವೇ ಇದಕ್ಕೆ ಕಾರಣ. ತೈಲ ದರ ಸೇರಿದಂತೆ ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದು ಕಚ್ಚಾವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಹೀಗಾಗಿ ನಾವು ಅನಿರ್ವಾಯವಾಗಿ ಬೆಂಕಿಪೊಟ್ಟಣದ ಬೆಲೆಯನ್ನು ಏರಿಸಬೇಕಾಗಿದೆ ಎಂದು ಮ್ಯಾಚ್ಬಾಕ್ಸ್ ತಯಾರಿಕಾ ಕಂಪನಿಗಳ ಮಾಲೀಕರು ತಿಳಿಸಿದ್ದಾರೆ.
ತಮಿಳುನಾಡಿನ ಶಿವಕಾಶಿಯಲ್ಲಿರುವ ಆಲ್ ಇಂಡಿಯಾ ಚೇಂಬರ್ ಆಫ್ ಮ್ಯಾಚಸ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. '50 ಪೈಸೆ ಇದ್ದ ಬೆಂಕಿಪೊಟ್ಟಣದ ಬೆಲೆಯನ್ನು 2007 ರಲ್ಲಿ 1 ರೂ.ಗೆ ಏರಿಕೆ ಮಾಡಲಾಗಿತ್ತು. ಬರೋಬ್ಬರಿ 14 ವರ್ಷಗಳ ಬಳಿಕ ನಾವು ಬೆಂಕಿಪೊಟ್ಟಣದ ಬೆಲೆಯನ್ನು 2 ರೂ.ಗೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ತೀವ್ರಗತಿಯಲ್ಲಿ ಏರುತ್ತಿರುವ ಹಣದುಬ್ಬರವನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದು ಸಮಿತಿಯ ಸದಸ್ಯರು ಹೇಳಿದ್ದಾರೆ.
ಬೆಂಕಿಪೆಟ್ಟಿಗೆ ತಯಾರಕರ ಪ್ರಕಾರ, ಮ್ಯಾಚ್ಬಾಕ್ಸ್ ತಯಾರಿಸಲು 14 ವಿವಿಧ ರೀತಿಯ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ. ಕಳೆದ 14 ವರ್ಷಗಳಲ್ಲಿ ಇಂತಹ ಅನೇಕ ವಸ್ತುಗಳ ಬೆಲೆಗಳು ದ್ವಿಗುಣಗೊಂಡಿವೆ. ಇದು ಮ್ಯಾಚ್ಬಾಕ್ಸ್ ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.