ಉತ್ತರಾಖಂಡ, ಅ.23 (DaijiworldNews/HR): ಪ್ರತಿಕೂಲ ಹವಮಾನದಿಂದ ಉತ್ತರಾಖಂಡದಲ್ಲಿ ಅ.18 ರಂದು ನಾಪತ್ತೆಯಾಗಿದ್ದ ಚಾರಣಿಗರ ತಂಡದ 12 ಮಂದಿಯ ಮೃತದೇಹಗಳು ಪತ್ತೆಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 68ಕ್ಕೇರಿದೆ.
ಹರ್ಸಿಲ್ ಮತ್ತು ಲಂಕಾಘಾ ಪಾಸ್ ಸಮೀಪ ನಾಪತ್ತೆಯಾಗಿರುವ ಎರಡು ಚಾರಣ ತಂಡಗಳ ಸದಸ್ಯರ ಪತ್ತೆಗಾಗಿ ರಕ್ಷಣಾ ಕಾರ್ಯ ಮುಂದುವರಿದಿದೆ.
ಈ ಕುರಿತು ಉತ್ತರಾಖಂಡ ಡಿಜಿಪಿ ಅಶೋಕ ಕುಮಾರ್ ಮಾಹಿತಿ ನೀಡಿದ್ದು, ಹಾರ್ಸಿಲ್ನಲ್ಲಿ ನಾಪತ್ತೆಯಾಗಿದ್ದ 11 ಚಾರಣಿಗರ ಗುಂಪಿನ ಏಳು ಜನರ ಶವಗಳು ಪತ್ತೆಯಾಗಿದ್ದು,ಇಬ್ಬರನ್ನು ರಕ್ಷಿಸಲಾಗಿದೆ. ಇನ್ನಿಬ್ಬರು ನಾಪತ್ತೆಯಾಗಿದ್ದಾರೆ. ಲಂಕಾಘಾ ಪಾಸ್ ಬಳಿಯಿಂದ ಕಾಣೆಯಾಗಿದ್ದ 11 ಚಾರಣಿಗರ ಇನ್ನೊಂದು ಗುಂಪಿನ ಐವರ ಶವಗಳೂ ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.
ಇನ್ನು ಬಾಗೇಶ್ವರಿಯ ಪಿಂಡಾರಿ ಮತ್ತು ಕಾಫ್ನಿ ನೀರ್ಗಲ್ಲು ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿದ್ದ ಆರು ವಿದೇಶಿಯರು ಸೇರಿದಂತೆ 65 ಚಾರಣಿಗರನ್ನು ರಕ್ಷಿಸುವಲ್ಲಿ ರಾಜ್ಯ ವಿಪತ್ತು ಪ್ರಕ್ರಿಯಾ ಪಡೆಯು ಯಶಸ್ವಿಯಾಗಿದೆ.