ಬೆಂಗಳೂರು, ಅ.23 (DaijiworldNews/HR): ಎರಡೂಕಾಲು ವರ್ಷಗಳಲ್ಲಿ ಬಿಜೆಪಿಯು ಏನೆಲ್ಲಾ ಕೆಲಸ ಮಾಡಿದೆ ಎಂದು ಪಟ್ಟಿಕೊಡಲಿ, ಐದು ವರ್ಷದ ನನ್ನ ಆಡಳಿತದಲ್ಲಿ ನಾನು ಯಾವೆಲ್ಲಾ ಯೋಜನೆ ಜಾರಿ ಮಾಡಿದ್ದೆ ಎಂದು ಪಟ್ಟಿ ಕೊಡುತ್ತೇನೆ. ಈ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆಯಾಗಲಿ. ಬೊಮ್ಮಾಯಿ ಅವರಿಗೆ ಇದು ನನ್ನ ಸವಾಲು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
"ಬುರುಡೆ ಬೊಮ್ಮಾಯಿ" ಎನ್ನುವ ಟ್ಯಾಗ್ ಬಳಸಿಕೊಂಡು ಬಿಜೆಪಿಯ ಬುರುಡೆ ರಾಮಯ್ಯ ಎಂಬ ಟ್ವೀಟ್ಗೆ ತಿರುಗೇಟು ನೀಡಿರುವ ಅವರು, "ಕೊರೊನಾ ಸೋಂಕಿನಿಂದ ಉದ್ಯೋಗ ಕಳೆದು ಕೊಂಡ ಜನ ಬದುಕಿದ್ದು ಅನ್ನಭಾಗ್ಯ ಅಕ್ಕಿಯಿಂದ, ಇಂದಿರಾ ಕ್ಯಾಂಟೀನಿಂದ. ನರೇಂದ್ರ ಮೋದಿಯವರು ಹೇಳಿದಂತೆ ನೀವು ಬಡಿದ ತಟ್ಟೆ, ಹಚ್ಚಿದ ದೀಪದಿಂದ ಅಲ್ಲ.ನೀವು ನಿರ್ದಯಿಗಳು ನಾವು ಕೊಟ್ಟ ಅಕ್ಕಿಯನ್ನು ಕಸಿದುಕೊಳ್ಳಲು ಹೊರಟಿದ್ದೀರಿ" ಎಂದಿದ್ದಾರೆ.
"ಈಗ ಪ್ರತಿ ವರ್ಷ ಸಾಲ ಮಾಡುವ ಪ್ರಮಾಣ ರೂ. 72,000 ಕೋಟಿಗೆ ತಲುಪಲಿದೆ. ಕಳೆದ ವರ್ಷ ರೂ.69 ಸಾವಿರ ಕೋಟಿ ಸಾಲ ಮಾಡಿದರೂ ಕೊರೊನಾ ನಿರ್ವಹಣೆಗೆ ಖರ್ಚು ಮಾಡಿದ್ದು 5,400 ಕೋಟಿ ರೂ.ಗಳು ಮಾತ್ರ ಎಂದು ಹೇಳಿದ್ದೀರಿ. ಹಾಗಾದರೆ ಉಳಿದ ಹಣ ಎಲ್ಲಿಗೆ ಹೋಯಿತು" ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
"ಜಿ.ಎಸ್.ಡಿ.ಪಿ ಯಲ್ಲಿ ಶೇಕಡಾವಾರು ಸಾಲದ ಪ್ರಮಾಣ ನಮ್ಮ ಸರ್ಕಾರದ ಅವಧಿಯಲ್ಲಿ 17 ರಿಂದ 20 ರ ಒಳಗೆ ಇತ್ತು. ಇದು ದೇಶದಲ್ಲಿಯೇ ಅತ್ಯುತ್ತಮ ನಿರ್ವಹಣೆಯಾಗಿತ್ತು. ಆದರೆ ಈಗ ಅದು 26.9 ರಷ್ಟಾಗಿದೆ. ನಿಯಮಗಳ ಪ್ರಕಾರ ಇದು 25% ಮೀರುವಂತಿಲ್ಲ.ಸಾಲಕ್ಕಾಗಿ ನಿಯಮಗಳನ್ನೇ ತಿದ್ದಿದವರು ನೀವಲ್ಲವೇ" ಎಂದಿದ್ದಾರೆ.
"2013 ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯದ ಜಿ.ಎಸ್.ಡಿ.ಪಿ ಕೇವಲ 6,01,582 ಕೋಟಿ ಇತ್ತು. ನಾನು ಅಧಿಕಾರದಿಂದ ಇಳಿಯುವಾಗ ಅದು ರೂ.14,08,585 ಕೋಟಿಗೆ ಏರಿಕೆಯಾಗಿತ್ತು.’ನಾವು 2012-13 ರಲ್ಲಿ ಅಧಿಕಾರಕ್ಕೆ ಬಂದಾಗ ಇದ್ದ ಸಾಲ ರೂ. 1,21,000 ಕೋಟಿ. 2017-18 ರಲ್ಲಿ ನಮ್ಮ ಸರ್ಕಾರದ ಕೊನೆ ಬಜೆಟ್ ವೇಳೆ ಇದ್ದ ಸಾಲ ರೂ.2,42,420 ಕೋಟಿ" ಎಂದರು.
ಇನ್ನು "ಬಿಜೆಪಿ ಸರ್ಕಾರದ ಅವಧಿಯಲ್ಲಿನ ಸಾಲದ ಪ್ರಮಾಣ ಹಿಂದಿನ ಸರ್ಕಾರದ ಅವಧಿಗೆ ಹೋಲಿಸಿದರೆ ಒಟ್ಟಾರೆ ಶೇ. 94.18 ರಷ್ಟು ಏರಿಕೆಯಾಗಿತ್ತು. ನಮ್ಮ ಸರ್ಕಾರದ ಅವಧಿಯಲ್ಲಿ 2013-18 ರವರೆಗೆ ಏರಿಕೆಯಾಗಿದ್ದು ಶೇಕಡಾ 78 ರಷ್ಟು ಮಾತ್ರ" ಎಂದು ಹೇಳಿದ್ದಾರೆ.
"ಕಳೆದ ಎರಡೂಕಾಲು ವರ್ಷಗಳ ರಾಜ್ಯ ಬಿಜೆಪಿ ಸರ್ಕಾರದ ಮತ್ತು ಏಳು ವರ್ಷಗಳ ನರೇಂದ್ರ ಮೋದಿ ಸರ್ಕಾರದ ವೈಫಲ್ಯಗಳು ಜನರನ್ನು ಭ್ರಮನಿರಸನಗೊಳಿಸಿದೆ. 2014 ರಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ" ಎಂದರು.