ಸಿಂದಗಿ, ಅ.23 (DaijiworldNews/HR): ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಅವರಿಗೆ ಮತ ಹಾಕಿ, ಬಿಜೆಪಿ ಸರ್ಕಾರಕ್ಕೆ ನೀವು ಪಾಠ ಕಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಹೇಳಿದ್ದಾರೆ.
ಸಿಂದಗಿಯಲ್ಲಿ ಉಪ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಕೊರೊನಾ ಬಂದಾಗ ಯಡಿಯೂರಪ್ಪನವರು 1900 ಕೋಟಿ ರೂ. ಪ್ಯಾಕೇಜ್ ಘೋಷಿಸಿದ್ದರು. ಅದಾದ ನಂತರ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದರು. ನಿಮಗೆ ಈ ಪ್ಯಾಕೇಜ್ ಗಳಿಂದ ಪರಿಹಾರ ಸಿಕ್ಕಿತಾ? ನಿಮ್ಮ ಖಾತೆಗೆ ಹಣ ಬಂತಾ?" ಎಂದು ಪ್ರಶ್ನಿಸಿದ್ದಾರೆ.
ಇನ್ನು "ವಿದೇಶಗಳಲ್ಲಿರುವ ಕಪ್ಪುಹಣ ತಂದು ನಿಮ್ಮ ಖಾತೆಗೆ ತಲಾ 15 ಲಕ್ಷ ರು. ಹಾಕುತ್ತೇವೆ ಎಂದಿದ್ದರು. ಆ ಹಣ ನಿಮಗೆ ಬಂತಾ? ಉದ್ಯೋಗ ಸಿಕ್ಕಿತಾ? ಬೀದಿ ವ್ಯಾಪಾರಿಗಳು, ಅಂಗಡಿ ವ್ಯಾಪಾರಿಗಳು, ಚಾಲಕರು, ವೃತ್ತಿ ಆಧಾರಿತ ಕಾರ್ಮಿಕರಿಗೆ ಹಣ ಬಂತಾ? ಆಸ್ಪತ್ರೆ ಕೋವಿಡ್ ಚಿಕಿತ್ಸೆ ಬಿಲ್ ಕೊಟ್ಟಿದ್ದಾರಾ? ಸತ್ತವರಿಗೆ ಪರಿಹಾರ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.