ಬೆಂಗಳೂರು, ಅ.23 (DaijiworldNews/PY): "ನಾವು ಕತ್ತಿ ಹಿಡಿದರೆ ನಿಮಗೆ ಶವ ಹೂಳಲು ಜಾಗ ಇರುವುದಿಲ್ಲ" ಎಂದು ವಿಹೆಚ್ಪಿ ಮುಖಂಡರ ಹೇಳಿಕೆಗೆ ಕಾಂಗ್ರೆಸ್ ಕಿಡಿಕಾರಿದೆ.
ತುಮಕೂರಿನಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ್ದ ವಿಶ್ವ ಹಿಂದೂ ಪರಿಷತ್ನ ರಾಜ್ಯ ಸಂಚಾಲಕ ಬಸವರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಮುಖ್ಯಮಂತ್ರಿಗಳ 'ಆಕ್ಷನ್'ಗೆ ಬಿಜೆಪಿಯ ಸಮಾಜಘಾತುಕ ಪಡೆಯ 'ರಿಯಾಕ್ಷನ್' ಹೆಚ್ಚುತ್ತಿದೆ. ಸರ್ಕಾರಕ್ಕೆ ಈ ಸಮಾಜ ವಿರೋಧಿ ಸಂಘಟನೆಗಳ ನಿಯಂತ್ರಣ ಸಾಧ್ಯವಿಲ್ಲವೇ ಅಥವಾ ಸರ್ಕಾರವೇ ಇವರ ಬೆಂಬಲಕ್ಕೆ ನಿಂತಿದೆಯೇ ಎಂದು ಸಿಎಂ ಸ್ಪಷ್ಟಪಡಿಸಬೇಕು ಎಂದಿದೆ.
"ರಾಮರಾಜ್ಯ ಎಂದು ಬೊಗಳೆ ಬಿಡುವ ಬಿಜೆಪಿ ಆಡಳಿತದಲ್ಲಿ ಜನಸಾಮಾನ್ಯರಿಗೆ ರಕ್ಷಣೆ ಇಲ್ಲವೇ?" ಎಂದು ಪ್ರಶ್ನಿಸಿದೆ.
"ಹಿಂದೂಗಳ ಮೇಲೆ ನಡೆಯುವ ಹಲ್ಲೆಗೆ ನಾವು ಪ್ರತಿಕ್ರಿಯೆ ಕೊಡಲು ಕತ್ತಿ ಹಿಡಿದರೆ ನಿಮಗೆ ಶವ ಹೂಳಲೂ ಜಾಗ ಸಿಗುವುದಿಲ್ಲ" ಎಂದು ವಿಶ್ವ ಹಿಂದೂ ಪರಿಷತ್ನ ರಾಜ್ಯ ಘಟಕದ ಸಂಚಾಲಕ ಬಸವರಾಜ್ ಎಚ್ಚರಿಕೆ ನೀಡಿದ್ದರು.
"ಹಿಂದೂಗಳ ಮೇಲೆ ಹಲ್ಲೆ, ಗೂಂಡಾಗಿರಿ ಮಾಡಿದರೆ, ಗೋ ಹತ್ಯೆ, ಲವ್ ಜಿಹಾದ್ ನಡೆಸಿದರೆ ನಾವು ಸುಮ್ಮನೆ ಬಿಡುವುದಿಲ್ಲ. ನಾವು ಬಹುಸಂಖ್ಯಾತರು. ನಮ್ಮೊಂದಿಗೆ ಬದುಕಬೇಕಾದರೆ ಸರಿಯಾಗಿ ಇರಬೇಕು. ನಾವು ಹೇಳಿದಂತೆ ಕೇಳಬೇಕು. ಕಾನೂನು ಕೈಗೆತ್ತಿಕೊಂಡರೆ ತಕ್ಕ ಶಾಸ್ತಿ ಮಾಡುತ್ತೇವೆ" ಎಂದಿದ್ದರು.