ಬೆಂಗಳೂರು, ಅ.23 (DaijiworldNews/PY): "ಕಾಂಗ್ರೆಸ್ ಜಾತ್ಯಾತೀತ ಪಕ್ಷ. ಹಾಗಾಗಿ ಮುಸ್ಲಿಮರು ಕಾಂಗ್ರೆಸ್ ಜೊತೆಗಿದ್ದಾರೆ. ನಾಳೆ ಬಿಜೆಪಿ ಜಾತ್ಯಾತೀತ ಪಕ್ಷವಾದರೆ ಮುಸ್ಲಿಮರು ಬಿಜೆಪಿಯೊಂದಿಗೆ ಇರುತ್ತಾರೆ" ಎಂದು ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೇಶದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಲ್ಲ. ದೇಶದಲ್ಲಿ 22 ಕೋಟಿ ಮುಸ್ಲಿಂ ಜನಸಂಖ್ಯೆ ಇದೆ. ಹಾಗಾಗಿ ಮುಸ್ಲಿಮರು ಹೇಗೆ ಅಲ್ಪಸಂಖ್ಯಾತರಾಗುತ್ತಾರೆ. ಮುಸ್ಲಿಮರ ಕೈಹಿಡಿಯಲು ರಾಜಕೀಯ ಬೇಕಾಗಿಲ್ಲ, ಬದಲಾಗಿ ಸಂವಿಧಾನ ಒಂದೇ ಸಾಕು" ಎಂದಿದ್ದಾರೆ.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಹೆಚ್ಡಿಕೆ ಅವರ ಹೇಳಿಕೆ ಎಲ್ಲಾ ಸತ್ಯ ಎಂದಲ್ಲ. ಸಿದ್ದರಾಮಯ್ಯ ಅವರು ಜಾಫರ್ ಷರೀಫ್ ಮೊಮ್ಮಗನನ್ನು ಸೋಲಿಸಿದ್ದು ಎಂದು ಹೆಚ್ಡಿಕೆ ಹೇಳುತ್ತಾರೆ. ಹಾಗಾದರೆ, ಕುಮಾರಸ್ವಾಮಿ ಅವರು ಜಾಫರ್ ಮೊಮ್ಮಗನಿಗೆ ಟಿಕೆಟ್ ನೀಡಿ ಗೆಲ್ಲಿಸಬೇಕಿತ್ತು" ಎಂದು ಹೇಳಿದ್ದಾರೆ.
ಉಗ್ರಪ್ಪ- ಸಲೀಂ ಸಂಭಾಷಣೆಯ ವಿಚಾರದ ಬಗ್ಗೆ ಮಾತನಾಡಿದ ಅವರು, "ಶಿಸ್ತು ಸಮಿತಿಯಲ್ಲಿ ಅವರ ಉತ್ತರ ನೋಡುತ್ತೇವೆ. ಸಲೀಂ ಮಾತನಾಡಿದ್ದು, ಮೇಲ್ನೋಟಕ್ಕೆ ಸ್ಪಷ್ಟವಾಗಿತ್ತು. ಲೂಸ್ ಟಾಕ್ ಎಂದು ತಿಳಿದಿತ್ತು. ಹಾಗಾಗಿ ಅವರ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ. ಆದರೆ, ಉಗ್ರ ಅವರ ಮಾತು ಸ್ಪಷ್ಟವಾಗಿಲ್ಲ" ಎಂದು ತಿಳಿಸಿದ್ದಾರೆ.