ಬೆಂಗಳೂರು, ಅ.23 (DaijiworldNews/PY): "ಫಸಲ್ ಭೀಮಾ ಯೋಜನೆಯಿಂದ ಕೇಂದ್ರದ ಪುಕ್ಕಟೆ ಪ್ರಚಾರದ ಸಾಧನವಾಗಿದೆಯೇ ಹೊರತು ರೈತರಿಗೆ ನಿರೀಕ್ಷಿತ ಉಪಯೋಗವಾಗುತ್ತಿಲ್ಲ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಈ ಅಕ್ಟೋಬರ್ನಲ್ಲಿ ಸುರಿದ ಅಕಾಲಿಕ ಮಳೆ ರಾಜ್ಯಾದ್ಯಂತ ಅನಾಹುತ ಸೃಷ್ಟಿಸಿದೆ. ಜೀವಹಾನಿಯ ಜೊತೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ತರಕಾರಿ, ಸೊಪ್ಪು, ಈರುಳ್ಳಿ ಕೊಳೆತು ಹೋಗಿವೆ. ತೋಟಗಾರಿಕಾ ಬೆಳೆಗಳಾದ ಕಾಫಿ, ಕಾಳು ಮೆಣಸು, ಅಡಕೆ ಉದುರಿ ಹೋಗಿವೆ. ಸದಾ ಸಂಕಷ್ಟದಲ್ಲಿರುವ ರೈತರಿಗೆ ಇದು ಗಾಯದ ಮೇಲೆ ಬರೆ ಎಳೆದಂತೆ" ಎಂದು ಹೇಳಿದ್ದಾರೆ.
"ಹವಾಮಾನ ವೈಪರಿತ್ಯದಿಂದ ಬೆಳೆ ಹಾನಿಯಾದರೆ ವಿಮೆ ಪಡೆಯಲು ಕೇಂದ್ರ ಸರ್ಕಾರ ಫಸಲ್ ಭೀಮಾ ಯೋಜನೆ ತಂದಿದೆ. ದುರಂತವೆಂದರೆ ಈ ಯೋಜನೆಯೂ ಕೂಡ ಕೇಂದ್ರದ ಪುಕ್ಕಟೆ ಪ್ರಚಾರದ ಸಾಧನವಾಗಿದೆಯೇ ಹೊರತು ರೈತರಿಗೆ ನಿರೀಕ್ಷಿತ ಉಪಯೋಗವಾಗುತ್ತಿಲ್ಲ. ಈ ಯೋಜನೆಯಡಿ ಲಕ್ಷಾಂತರ ರೈತರು ಪ್ರೀಮಿಯಂ ಪಾವತಿಸಿದ್ದಾರೆ. ಆದರೆ ರೈತರಿಗೆ ವಿಮಾ ಪರಿಹಾರ ಸಿಗುತ್ತಿಲ್ಲ" ಎಂದಿದ್ದಾರೆ.
"ಫಸಲ್ ಭೀಮಾ ಯೋಜನೆಯ ಶೇ.95ರಷ್ಟು ಕಂತನ್ನು ಎರಡು ಸರ್ಕಾರಗಳು ಭರಿಸಿದರೆ, ಉಳಿದ ಶೇ.5ರಷ್ಟು ಕಂತು ರೈತ ಪಾವತಿಸಬೇಕು. ಕೆಲವು ಪ್ರಕರಣಗಳಲ್ಲಿ ರೈತರು ಕಟ್ಟಿದ ಕಂತಿನ ಅರ್ಧದಷ್ಟು ಪರಿಹಾರ ಸಿಕ್ಕಿಲ್ಲ. ಇನ್ನು ಕಳೆದ 5 ವರ್ಷಗಳಲ್ಲಿ 80ಲಕ್ಷ ರೈತರು ಪರಿಹಾರಕ್ಕೆ ಅರ್ಜಿ ಹಾಕಿದ್ದಾರೆ. ಆದರೆ ಕೇವಲ 40 ಲಕ್ಷ ರೈತರಿಗೆ ಮಾತ್ರ ಪರಿಹಾರ ಸಿಕ್ಕಿದೆ" ಎಂದು ತಿಳಿಸಿದ್ದಾರೆ.
"ವಿಮಾ ಕಂಪನಿಗಳು ಕೆಲವು ತಾಂತ್ರಿಕ ಕಾರಣ ಹೇಳಿ ರೈತರಿಗೆ ಬೆಳೆ ಪರಿಹಾರ ನೀಡಲು ತಿರಸ್ಕರಿಸುತ್ತಿವೆ. ರೈತರಿಂದ ಕೊಟ್ಯಂತರ ಪ್ರೀಮಿಯಂ ಸಂಗ್ರಹಿಸುವ ವಿಮಾ ಕಂಪನಿಗಳು ಪರಿಹಾರ ನೀಡಲು ನೂರು ನೆಪ ಹೇಳುತ್ತಿವೆ. ಮೇಲ್ನೋಟಕ್ಕೆ ಇದೊಂದು ದೊಡ್ಡ ಹಗರಣದಂತೆ ಭಾಸವಾಗುತ್ತಿದೆ. ರೈತರಿಂದ ಸಂಗ್ರಹಿಸುವ ಕೊಟ್ಯಂತರ ಪ್ರೀಮಿಯಂ ಹಣದ ಲೆಕ್ಕ ಯಾರ ಬಳಿ ಇದೆ?" ಎಂದು ಪ್ರಶ್ನಿಸಿದ್ದಾರೆ.
"ವಿಮೆ ಸಿಗದೇ ಹೋದರೆ ಯಾವ ರೈತರು ಬೆಳೆವಿಮೆ ಮಾಡಿಸುವ ಸಾಹಸಕ್ಕೆ ಕೈ ಹಾಕುವುದಿಲ್ಲ. ಹಾಗಾಗಿ ಫಸಲ್ ಭೀಮಾ ಯೋಜನೆ ಹಳ್ಳ ಹಿಡಿದು ಹೋಗಿದೆ. ಇನ್ನು ಬಹುತೇಕ ರೈತರು ಮಾಹಿತಿ ಕೊರತೆಯಿಂದ ಬೆಳೆ ವಿಮೆ ಮಾಡಿಸಿಲ್ಲ. ಈಗ ಸುರಿಯುತ್ತಿರುವ ಅಕಾಲಿಕ ಮಳೆ ಇವರ ಬದುಕನ್ನೂ ಬೀದಿಗೆ ತಂದಿದೆ. ರಾಜ್ಯ ಸರ್ಕಾರ ಕೂಡಲೇ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಲಿ" ಎಂದು ಆಗ್ರಹಿಸಿದ್ದಾರೆ.