ಬೆಂಗಳೂರು, ಅ.23 (DaijiworldNews/HR): "ಹಣ ಹಂಚಿಕೆ ಮಾಡಿ ಮತ ಪಡೆದು ನಮಗೆ ರೂಢಿ ಇಲ್ಲ. ನಮ್ಮ ಪಕ್ಷ ಅಷ್ಟೊಂದು ಕೆಳ ಮಟ್ಟಕ್ಕೆ ಇಳಿದೂ ಇಲ್ಲ. ಕಾಂಗ್ರೆಸ್ ಪಕ್ಷದವರೇ ಮೂಟೆ ಮೂಟೆ ಹಣ ತಂದು ಹಂಚಿ ಚುನಾವಣೆ ಗೆಲ್ಲಲು ಪ್ಲಾನ್ ಮಾಡಿರಬೇಕು" ಎಂದು ಲಕ್ಷ್ಮಣ ಸವದಿ ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ.
ಚುನಾವಣೆಗೆಯಲ್ಲಿ ಬಿಜೆಪಿ ನಾಯಕರು ಹಣ ಹಂಚಿ ಮತ ಬೇಟೆ ಮಾಡುತ್ತಿದ್ದಾರೆ ಎಂಬ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿರುವ ಅವರು, "ಹಣ ಹಂಚಿಕೆ ಮಾಡಿ ಮತ ಪಡೆದು ನಮಗೆ ರೂಢಿ ಇಲ್ಲ. ಜನರ ನಾಡಿ ಮಿಡಿತ ಏನು ಅನ್ನುವುದು ಬಿಜೆಪಿಗೆ ಅರ್ಥವಾಗಿದೆ. ಸಿಂದಗಿಯಲ್ಲಿ ರಮೇಶ ಭೂಸನೂರ 25 ಸಾವಿರ ಮತಗಳ ಅಂತರದಲ್ಲಿ ಜಯಿಸಲಿದ್ದಾರೆ. ಈ ಚುನಾವಣೆಯಲ್ಲಿ ಗೆಲ್ಲಲು ಮೋದಿ ಹಾಗೂ ಬೊಮ್ಮಾಯಿ ಆಡಳಿತವೇ ನಮಗೆ ವರದಾನವಾಗಲಿದೆ" ಎಂದರು.
ಇನ್ನು "ಕಳೆದ ಬಾರಿ ಅನುಕಂಪದ ಮತ ಪಡೆದು ಮನಗೂಳಿ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಭೂಸನೂರ ಪರ ಜನರಿಗೆ ಒಲವಿದೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಈ ಭಾಗದ ಜನತೆ ಶತಾಯಗತಾಯ ಯತ್ನಿಸುತ್ತಿದ್ದಾರೆ" ಎಂದಿದ್ದಾರೆ.
ಅಕ್ಟೋಬರ್ 24ರಂದು ಸಿಎಂ ಬೊಮ್ಮಾಯಿ ಕೂಡ ಸಿಂದಗಿಯಲ್ಲಿನ 12 ಗ್ರಾಮಗಳಲ್ಲಿ ಪ್ರಚಾರ ಕಾರ್ಯ ನಡೆಸಲಿದ್ದು, ಮಧ್ಯಾಹ್ನದ ಬಳಿಕ ಪಟ್ಟಣದಲ್ಲಿ ಕ್ಯಾಂಪೇನ್ ನಡೆಸುತ್ತಾರೆ. ಈಶ್ವರಪ್ಪ ಕೂಡ ಪ್ರಚಾರ ಕಾರ್ಯಕ್ಕೆ ಆಗಮಿಸುತ್ತಾರೆ ಎಂದು ಹೇಳಿದ್ದಾರೆ.