ಹುಬ್ಬಳ್ಳಿ, ಅ.23 (DaijiworldNews/HR): ಸಿದ್ದರಾಮಯ್ಯಗೆ ಕುಮಾರಸ್ವಾಮಿನೇ ಟಾರ್ಗೆಟ್. ಸಿದ್ದರಾಮಯ್ಯನವರೇ ನಿಮ್ಮ ವರ್ಚಸ್ಸು ಹಾಗೂ ರಾಜಕೀಯ ಶಕ್ತಿ ಕುಂದಿಸಿಕೊಳ್ಳುವಂತಹ ಕೆಲಸ ಮಾಡಬೇಡಿ ಎಂದು ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ನಾನು ಯಾರ ಮೇಲೂ ವೈಯಕ್ತಿಕ ನಿಂದನೆ ಮಾಡಿಲ್ಲ. ಆದರೆ ನಾನು ಎಲ್ಲ ನಾಯಕರಿಗೂ ಹೇಳುತ್ತೇನೆ. ಚುನಾವಣೆಯೇ ಇರಬಹುದು ಅಥವಾ ಜನಪ್ರತಿನಿಧಿಯೇ ಆಗಿರಬಹುದು. ಸರ್ಕಾರ ನಡೆಸಬೇಕಾದರೆ ಅದರ ಆಧಾರದ ಮೇಲೆ ಚರ್ಚೆ ಮಾಡಿ. ಅದು ಬಿಟ್ಟು ವೈಯಕ್ತಿಕವಾದ ವಿಚಾರ ಚರ್ಚೆ ಮಾಡಲು ಹೋದರೆ ಪರಸ್ಪರ ಕೆಸರೆಚಾಟ ಮಾಡಿಕೊಂಡು ಹೋದರೆ ಅದಕ್ಕೆ ಕೊನೆ ಅನ್ನೋದು ಇರೋದಿಲ್ಲ" ಎಂದರು.
ಇನ್ನು ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, "ಸಿದ್ದರಾಮಯ್ಯ ಇದನ್ನು ಬಿಟ್ಟು ಇನ್ನೇನನ್ನು ಹೇಳಲು ಸಾಧ್ಯ? ನನಗೆ ಯಾವುದೇ ಕಾರಣಕ್ಕೂ ಯಾರ ಮೇಲೆಯೂ ಸಾಫ್ಟ್ ಕಾರ್ನರ್ ಇಲ್ಲ, ನಮಗೆ ಬಿಜೆಪಿ ಮೇಲೆ ಸಾಫ್ಟ್ ಕಾರ್ನರ್ ಇದ್ದಿದ್ದರೆ ಕಾಂಗ್ರೆಸ್ ಜೊತೆ ಏಕೆ ಸರ್ಕಾರ ರಚಿಸುತ್ತಿದ್ವಿ? ಬಿಜೆಪಿ ಜೊತೆಯೇ 5 ವರ್ಷ ಸರ್ಕಾರ ಮಾಡುತ್ತಿದ್ದೆ. 2006ರಲ್ಲಿ ಸರ್ಕಾರ ನಿರ್ಮಾಣವಾಗಲು ಕೂಡ ಇದೇ ಸಿದ್ದರಾಮಯ್ಯ ಕಾರಣ" ಎಂದಿದ್ದಾರೆ.