ಮೈಸೂರು, ಅ.23 (DaijiworldNews/HR): ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಾಲಿಬಾನ್ ಆಡಳಿತ ಹೇಗಿದೆ ಎಂದು ಖುದ್ದಾಗಿ ತಿಳಿದು ಕೊಳ್ಳಬೇಕಾಗಿದೆ. ಹಾಗಾಗಿ ಅವರನ್ನು ಒಂದು ತಿಂಗಳ ಕಾಲ ತಾಲಿಬಾನ್ ಆಡಳಿತವಿರುವ ಆಫ್ಘಾನಿಸ್ತಾನಕ್ಕೆ ಕಳುಹಿಸಿ ಕೊಡಬೇಕಾಗಿದೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರವನ್ನು ತಾಲಿಬಾನ್ ಸರ್ಕಾರ ಎಂದು ಕರೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಒಂದು ತಿಂಗಳ ಕಾಲ ತಾಲಿಬಾನ್ ಆಡಳಿತವಿರುವ ಆಫ್ಘಾನಿಸ್ತಾನಕ್ಕೆ ಕಳುಹಿಸಿ ಕೊಡಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.
ಇನ್ನು "ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷಗಳಿಗೆ ಜವಾಬ್ದಾರಿ ಇದ್ದು, ವಿರೋಧ ಪಕ್ಷದ ನಾಯಕರಾದವರು ವಿವೇಚನೆಯಿಂದ ಜವಾಬ್ದಾರಿಯುತವಾಗಿ ಮಾತನಾಡಬೇಕು. ಆದರೆ, ದೇಶದ ಪ್ರಧಾನಿ ಬಗ್ಗೆ ಬೇಜವಾಬ್ದಾರಿತನದಿಂದ ಅವಹೇಳನಕಾರಿಯಾಗಿ ಮಾತನಾಡುವುದು ತಪ್ಪು" ಎಂದು ಹೇಳಿದ್ದಾರೆ.