ಬಾಗಲಕೋಟೆ, ಅ.23 (DaijiworldNews/PY): "ಚುನಾವಣೆ ಇರುವ ಕಾರಣ ಆರ್ಎಸ್ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ಬಗ್ಗೆ ರಾಜಕೀಯ ನಾಯಕರು ಟೀಕಿಸುತ್ತಾರೆ. ಚುನಾವಣೆ ಮುಗಿದ ಬಳಿಕ ಅದು ಸರಿಯಾಗುತ್ತದೆ" ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆರ್ಎಸ್ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಆರ್ಎಸ್ಎಸ್ ಅನ್ನು ತೆಗೆಳುವ ಉದ್ದೇಶ ಏನು ಎನ್ನುವುದು ಎಲ್ಲರಿಗೂ ತಿಳಿದಿದೆ. ಆರ್ಎಸ್ಎಸ್ ಹಾಗೂ ವಿಹೆಚ್ಪಿಯನ್ನು ತೆಗೆಳಿದರೆ ಓಟ್ ಬರುತ್ತದೆ ಎನ್ನುವ ಭ್ರಮೆಯಲ್ಲಿ ಇದ್ದಾರೆ. ಅಲ್ಪಸಂಖ್ಯಾತರ ಮತ ಬರುತ್ತದೆ ಎಂದಿ ಆರ್ಎಸ್ಎಸ್ ಅನ್ನು ಟೀಕಿಸುತ್ತಿದ್ದಾರೆ" ಎಂದಿದ್ದಾರೆ.
"ಚುನಾವಣೆ ಬಂದ ಸಂದರ್ಭ ರಾಜಕೀಯ ನಾಯಕರು ಆರ್ಎಸ್ಎಸ್ ಬಗ್ಗೆ ಏಕೆ ಮಾತನಾಡುತ್ತಾರೆ?. ಇದರಿಂದ ಅವರು ಸಮಾಜದ ಮುಂದೆ ಮತ್ತಷ್ಟು ಸಣ್ಣವರಾಗುತ್ತಾರೆ" ಎಂದು ಹೇಳಿದ್ದಾರೆ.
"ಆರ್ಎಸ್ಎಸ್ ವಿರುದ್ದ ಟೀಕೆ ಮಾಡುವುದು ಇದೇ ಮೊದಲಲ್ಲ. ಚುನಾವಣೆ ಇರುವ ಕಾರಣ ಕೆಲವರು ಆರ್ಎಸ್ಎಸ್ ಅನ್ನು ಟೀಕಿಸುತ್ತಿದ್ದಾರೆ. ಓಲೈಕೆ ರಾಜಕಾರಣಕ್ಕೆ ಜನರು ಮರಳಾಗುವುದಿಲ್ಲ" ಎಂದಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೃಷ್ಣ ಮಠಕ್ಕೆ ಭೇಟಿ ನೀಡದ ವಿಚಾರಕ್ಕೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಕೊರೊನಾ ಪ್ರಭಾವ ಇನ್ನೂ ಕಡಿಮೆಯಾಗಿಲ್ಲ. ಪರಿಸ್ಥಿತಿ ಕ್ರಮೇಣ ಸುಧಾರಿಸಬಹುದು. ಎಲ್ಲರೂ ಕೂಡಾ ಎಲ್ಲಾ ಕಡೆಗೆ ಹೋಗಬೇಕು ಎಂದೇನಿಲ್ಲ. ದೊಡ್ಡ ಕಾರ್ಯಕ್ರಮಗಳನ್ನು ನಾವೂ ಕೂಡಾ ಹಮ್ಮಿಕೊಂಡಿಲ್ಲ" ಎಂದು ಹೇಳಿದ್ದಾರೆ.