ಬೆಂಗಳೂರು, ಅ 23 (DaijiworldNews/MS): ತಮ್ಮ ಅಧಿಕಾರಾವಧಿಯಲ್ಲಿ ಜನತೆಗೆ 15 ಲಕ್ಷ ಮನೆ ಮಂಜೂರು ಮಾಡಿದ್ದಾಗಿ ಹೇಳಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತ ಪಡಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಅಧಿಕಾರಾವಧಿಯ ಕೊನೆಯಲ್ಲಿ "ಮುಖ್ಯಮಂತ್ರಿ 1 ಲಕ್ಷ ಮನೆ" ಯೋಜನೆಯನ್ನು ಬೆಂಗಳೂರು ನಗರದ ಬಡವರಿಗೆ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಆದರೆ ಬಜೆಟ್ನಲ್ಲಿ ಸೂಕ್ತ ಅನುದಾನ ಕಾಯ್ದಿರಿಸಲಿಲ್ಲ. ಮನೆಕಟ್ಟುವುದಕ್ಕೆ ಆಯ್ದುಕೊಂಡ ಜಾಗವೇ ವಿವಾದಗ್ರಸ್ಥವಾಗಿತ್ತು. ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ಅವರಿಗೆ ಪಿಎಚ್ಡಿ ನೀಡಬಹುದು ಎಂದು ಲೇವಡಿ ಮಾಡಿದೆ.
ಇನ್ನೆಷ್ಟು ದಿನ ಸಂತೆ ಭಾಷಣ ಹೊಡೆಯುತ್ತೀರಿ ಬುರುಡೆರಾಮಯ್ಯ, ನೀವು ಘೋಷಣೆ ಮಾಡಿದ 15 ಲಕ್ಷ ಮನೆ ಎಲ್ಲಿದೆ? ಭೂಮಿಯ ಮೇಲಿದೆಯೋ, ಮಂಗಳ ಗ್ರಹದಲ್ಲಿದೆಯೋ? ಕೇವಲ ಘೋಷಣೆ ಮಾಡಿದ ಮಾತ್ರಕ್ಕೆ ಮನೆ ನಿರ್ಮಾಣವಾಗುತ್ತದೆಯೇ? ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತದೆಯೇ? ಎಂದು ಪ್ರಶ್ನಿಸಿದೆ.
ಕೃಷ್ಣಾ ಕಣಿವೆ ನೀರಾವರಿ ಯೋಜನೆಗೆ ವಾರ್ಷಿಕ 10 ಸಾವಿರ ಕೋಟಿ ಅನುದಾನ ನೀಡುತ್ತೇನೆಂದು ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದಿರಿ.ಆದರೆ ಕೊಟ್ಟಿದ್ದು ಬಿಡಿಗಾಸು.ಅಂಗೈಯಲ್ಲಿ ಆಕಾಶ ತೋರಿಸುವ ವಿಚಾರದಲ್ಲಿ ನೀವು ಪ್ರವೀಣರಲ್ಲವೇ ಎಂದು ಕುಹಕವಾಡಿದೆ.