ಬೆಂಗಳೂರು, ಅ.23 (DaijiworldNews/PY): "ರಾಜ್ಯದಲ್ಲಿ ಅಕ್ಟೋಬರ್ 25ರಿಂದ 1-5ನೇ ತರಗತಿಗಳು ಪ್ರಾರಂಭವಾಗಲಿದ್ದು, ನಂತರದ ಪರಿಸ್ಥಿತಿ ಅವಲೋಕಿಸಿ ಎಲ್ಕೆಜಿ ಹಾಗೂ ಯುಕೆಜಿ ಆರಂಭಿಸಲಾಗುವುದು" ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. "ಸೋಮವಾರದಿಂದ 1-5ನೇ ತರಗತಿಗಳು ಪ್ರಾರಂಭವಾಗಲಿವೆ. ಮಕ್ಕಳ ಹಾಜರಾತಿಯಲ್ಲಿ ಸುಧಾರಣೆ ಕಾಣುತ್ತಿದೆ. ಇದೇ ಸಂದರ್ಭ ಬಿಸಿಯೂಟ ಕೂಡಾ ಆರಂಭವಾಗಲಿದ್ದು, ಮಕ್ಕಳ ಹಾಜರಾತಿಯಲ್ಲಿಯೂ ಏರಿಕೆಯಾಗಲಿದೆ" ಎಂದು ಹೇಳಿದ್ದಾರೆ.
"ಗ್ರಾಮೀಣ ಭಾಗದಲ್ಲಿಯೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಬರುತ್ತಿದ್ದಾರೆ. 1-5ನೇ ತರಗತಿಗಳು ಪ್ರಾರಂಭವಾದ ಬಳಿಕ ಪರಿಸ್ಥಿತಿ ಆಧರಿಸಿ ಎಲ್ಕೆಜಿ ಹಾಗೂ ಯುಕೆಜಿಯನ್ನು ಕೂಡಾ ಪ್ರಾರಂಭಿಸಲಾಗುವುದು" ಎಂದಿದ್ದಾರೆ.
"ಬೆಂಗಳೂರು ನಗರದ ಕೊಳಚೆ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದ್ದು, ಸಂಚಾರಿ ಕಲಿಕಾ ಕೇಂದ್ರ ಬಸ್ಗಳಲ್ಲಿ ಸಾಕಷ್ಟು ವ್ಯವಸ್ಥೆ ಕಲ್ಪಿಸಲಾಗಿದೆ. ಆರೋಗ್ಯ, ಪುಸ್ತಕ ಆಟದ ಸಾಮಾಗ್ರಿ, ಡಿಜಿಟಲ್ ರೂಪದ ಕಲಿಕಾ ಸಾಮಾಗ್ರಿಗಳನ್ನು ಬಸ್ ಹೊಂದದೆ. ನಗರದಲ್ಲಿ ಮೂರು ಸಂಚಾರಿ ಬಸ್ ಸೇವೆಗೆ ಸಿಗಲಿವೆ. ಈ ಬಸ್ಗಳು ಪ್ರತಿದಿನ ನಗರದ 30 ಬೇರೆ ಬೇರೆ ಪ್ರದೇಶದಲ್ಲಿ ಸಂಚರಿಸಲಿವೆ" ಎಂದು ತಿಳಿಸಿದ್ದಾರೆ.