ನವದೆಹಲಿ, ಅ.23 (DaijiworldNews/PY): "ಉಚಿತ ಲಸಿಕೆ ಸೇರಿದಂತೆ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಉಚಿತ ಊಟ, ಅಡುಗೆ ಅನಿಲ ಹಾಗೂ ಇತರ ಯೋಜನೆಗಳಿಗಾಗಿ ಇಂಧನದ ಮೇಲೆ ವಿಧಿಸಿರುವ ತೆರಿಗೆಯಿಂದ ಸಂಗ್ರಹವಾಗುವ ಹಣವನ್ನು ಬಳಸಿಕೊಳ್ಳಲಾಗುತ್ತಿದೆ" ಎಂದು ಕೇಂದ್ರ ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬೆಲೆ ಏರಿಕೆಯಾಗುತ್ತಿದೆ. ನೀವು ತೆರಿಗೆ ಇಳಿಸುತ್ತಿಲ್ಲವೇಕೆ? ಎನ್ನುವುದು ಭಾರತದಲ್ಲಿ ನಾವು ಕೇಳಬಹುದಾದ ಸರಳ ರಾಜಕೀಯ ನಿರೂಪಣೆಯಾಗಿದೆ. ಈ ಕಾರಣದಿಂದ ಪ್ರತಿಭಾರಿ ಬೆಲೆ ಏರಿಕೆಯಾದ ಸಂದರ್ಭ ಅದು ನಮ್ಮ ಬುಡಕ್ಕೆ ನಾವೇ ಕೊಡಲಿ ಹಾಕಿಕೊಳ್ಳುವ ಸ್ಥಿತಿಯನ್ನು ತಂದಿಡುತ್ತದೆ" ಎಂದು ಹೇಳಿದ್ದಾರೆ.
"ನಿನ್ನೆ ಶತಕೋಟಿ ಡೋಸ್ ಕೊರೊನಾ ಲಸಿಕೆ ವಿತರಣೆಯ ಗುರಿ ತಲುಪಿದ್ದೇವೆ. ಒಂದು ವರ್ಷ 90 ಕೋಟಿ ಮಂದಿಗೆ ಆಹಾರ ಪೂರೈಸಿದ್ದೇವೆ. ಉಜ್ವಲ ಯೋಜನೆಯನ್ನೂ ನೀಡಿದ್ದೇವೆ. ಕೇಂದ್ರ ಸರ್ಕಾರ ಹಲವು ಕಾರ್ಯಗಳು ಪ್ರತಿ ಲೀಟರ್ಗೆ ವಿಧಿಸಿರುವ 32 ರೂ. ತೆರಿಗೆಯಿಂದ ಸಾಧ್ಯವಾಗಿದೆ" ಎಂದಿದ್ದಾರೆ.
"ಬಡವರಿಗಾಗಿ ಮನೆ ನಿರ್ಮಾಣ, ರಸ್ತೆ ನಿರ್ಮಾಣ ಹಾಗೂ ಸಮಾಜ ಕಲ್ಯಾಣ ಯೋಜನೆಗಾಗಿ ತೆರಿಗೆ ಹಣ ಬಳಕೆ ಮಾಡಲಾಗಿದೆ" ಎಂದು ಹೇಳಿದ್ದಾರೆ.
ತೆರಿಗೆ ಇಳಿಕೆ ಬೇಡಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ನಾನು ಹಣಕಾಸು ಸಚಿವ ಅಲ್ಲ. ಹಾಗಾಗಿ ಇದಕ್ಕೆ ನಾನು ಸೂಕ್ತವಾದ ಉತ್ತರ ನೀಡುವುದು ಸರಿಯಲ್ಲ" ಎಂದು ತಿಳಿಸಿದ್ದಾರೆ.