ಶಿವಮೊಗ್ಗ, ಅ.23 (DaijiworldNews/PY): "ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ವಿರುದ್ದ ವಾಗ್ದಾಳಿ ನಡೆಸಿರುವ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ, ನಳಿನ್ ಕುಮಾರ್ ಕಟೀಲ್ ಅವರಿಗೆ ಸೀರೆ ಉಡಿಸಿದರೆ ಅವರು ಹೆಂಗಸು ಅಲ್ಲ, ಗಂಡಸು ಅಲ್ಲ. ಅಂತಹ ವ್ಯಕ್ತಿ ನಮ್ಮ ರಾಷ್ಟ್ರೀಯ ನಾಯಕರ ಬಗ್ಗೆ ಮಾತನಾಡುತ್ತಾರೆ" ಎಂದಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ಹಿಂದೆ ನಳಿನ್ ಅವರು ಮಂಗಳೂರಿಗೆ ಬೆಂಕಿ ಹಚ್ಚುತ್ತೇನೆ ಎಂದಿದ್ದು, ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ್ದರು. ವಿಧಾನಸಭೆಯಲ್ಲಿ ಅವರದ್ದೇ ಪಕ್ಷದ ಶಾಸಕರು ನೀಲಿ ಚಿತ್ರ ವೀಕ್ಷಿಸಿದ್ದರು. ಅತ್ಯಾಚಾರಿಗಳು ಅವರ ಪಕ್ಷದಲ್ಲೇ ಇದ್ದಾರೆ. ಅಲ್ಲದೇ, ಹಲವು ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಿರುವಾಗ ಕಟೀಲ್ ಅವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಸಚಿವ ಈಶ್ವರಪ್ಪ ಅವರು ಹಿರಿಯರು. ನಮ್ಮ ನಾಯಕರ ಬಗ್ಗೆ ಅವರೂ ಕೂಡಾ ಅವಾಚ್ಯ ಭಾಷೆ ಬಳಸುತ್ತಿದ್ದಾರೆ. ಈಶ್ವರಪ್ಪ ಅವರೇ, ನಿಮ್ಮ ಪಕ್ಷದಲ್ಲಿಯೇ ಕೊಳೆತು ನಾರುತ್ತಿದೆ. ಈ ವಿಚಾರವಾಗಿ ನಿಮಗೆ ನಾನು ಬೈದರೆ ನಿಮಗೆ ತಡೆದುಕೊಳ್ಳುವ ಶಕ್ತಿ ಇಲ್ಲ. ಕಾಂಗ್ರೆಸ್ ಮುಂದಿನ ಚುನಾವಣೆಗೆ ಇಲ್ಲ ಎಂದಿದ್ದಾರೆ. ಮುಂದಿನ ಚುನಾವಣೆಯ ಸಂದರ್ಭ ಈ ರೀತಿಯಾದ ಹೇಳಿಕೆ ನೀಡಿದವರೇ ಇರುವುದಿಲ್ಲ" ಎಂದಿದ್ದಾರೆ.