ಬೆಂಗಳೂರು, ಅ.22 (DaijiworldNews/HR): ಕೊರೊನಾ ಲಸಿಕೆ ವಿತರಣೆಯಲ್ಲಿ ಭಾರತದ ಪ್ರಗತಿಗೆ ಇಡೀ ವಿಶ್ವವೇ ಬೆರಗಾಗಿದ್ದರೂ ಕಾಂಗ್ರೆಸ್ ನಾಯಕರು ಮಾತ್ರ ಕೊಂಕು ನುಡಿಯುವುದರಲ್ಲಿ ನಿರತರಾಗಿದ್ದಾರೆ ಎಂದು ಬಿಜೆಪಿ ಹೇಳಿದೆ.
ಉದ್ಯಮಿ ಬಿಲ್ ಗೇಟ್ಸ್ ಭಾರತದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾಡಿರುವ ಟ್ವೀಟ್ ಉಲ್ಲೇಖಿಸಿ ಬಿಜೆಪಿ ಸರಣಿ ಟ್ವೀಟ್ ಮಾಡಿದ್ದು,‘ರಾಹುಲ್ ಗಾಂಧಿ ಹಾಗೂ ಡಿ.ಕೆ.ಶಿವಕುಮಾರ್ ಅವರೇ, ಲಸಿಕೆ ವಿತರಣೆಯಲ್ಲಿ ಭಾರತ ಸಾಧಿಸಿದ ಪ್ರಗತಿಗೆ ವಿಶ್ವವೇ ಬೆರಗಾಗಿದೆ. ಜಾಗತಿಕ ಗಣ್ಯರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ಸಿಗರು ಕೊಂಕು ನುಡಿಯುವುದರಲ್ಲಿ ತಲ್ಲೀನರಾಗಿದ್ದಾರೆ. ನೀವು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದೀರಾ" ಎಂದು ಪ್ರಶ್ನಿಸಿದೆ.
ಇನ್ನು ಕರ್ನಾಟಕದಲ್ಲಿ 45 ವರ್ಷ ಮೇಲ್ಪಟ್ಟವರ ಪೈಕಿ 1.66 ಕೋಟಿ ಜನರಿಗೆ ಮೊದಲ ಡೋಸ್ ಹಾಗೂ 1.07 ಕೋಟಿ ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಲಸಿಕೆ ವಿರುದ್ಧ ಆರಂಭದಲ್ಲಿ ಅಪಪ್ರಚಾರ ಮಾಡಿದ ಕಾಂಗ್ರೆಸ್ ಈಗ ದೇಶದ ಜನರ ಸಂಭ್ರಮವನ್ನೂ ಸಹಿಸಿಕೊಳ್ಳುತ್ತಿಲ್ಲ. ಸಿದ್ದರಾಮಯ್ಯನವರೇ, ನೀವೇಕೆ ಹೀಗೆ" ಎಂದು ಕೇಳಿದೆ.
"ರಾಜ್ಯದಲ್ಲಿ ಇದುವರೆಗೆ 6.21 ಕೋಟಿಗೂ ಹೆಚ್ಚು ಲಸಿಕೆ ವಿತರಿಸಲಾಗಿದೆ. 4.15 ಕೋಟಿಗೂ ಹೆಚ್ಚು ಜನರಿಗೆ ಮೊದಲ ಡೋಸ್ ಹಾಗೂ 2.06 ಕೋಟಿಗೂ ಅಧಿಕ ಜನರಿಗೆ ಎರಡನೇ ಡೋಸ್ ನೀಡಲಾಗಿದೆ. 18 ರಿಂದ 44 ವರ್ಷದೊಳಗಿನವರಿಗೆ 2.31 ಕೋಟಿಗೂ ಅಧಿಕ ಮೊದಲ ಡೋಸ್ ನೀಡಲಾಗಿದೆ. ಸಿದ್ದರಾಮಯ್ಯನವೇ ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ" ಎಂದು ಪ್ರಶ್ನಿಸಿದೆ.