ಬೆಂಗಳೂರು,ಅ.21 (DaijiworldNews/HR): ಒಂದರಿಂದ ಐದನೇ ತರಗತಿ ಅಕ್ಟೋಬರ್ 25 ರಿಂದ ಆರಂಭಿಸಲಾಗುತ್ತಿದ್ದು, ಶಾಲೆ ಆರಂಭಕ್ಕೆ ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲಾಗಿದೆ.
ಅಕ್ಟೋಬರ್ 25 ರಿಂದ 30 ರವರೆಗೆ ಮಾತ್ರ ಅರ್ಧ ದಿನ ತರಗತಿಗಳು ನಡೆಯಲಿದ್ದು, ನವೆಂಬರ್ 2 ರಿಂದ ಪೂರ್ಣಾವಧಿ ತರಗತಿಗಳನ್ನು ನಡೆಸಲಾಗುವುದು. ಮಕ್ಕಳು ಶಾಲೆಗೆ ಬರಲು ಪೋಷಕ ಒಪ್ಪಿಗೆ ಕಡ್ಡಾಯವಾಗಿದ್ದು, ಅಕ್ಟೋಬರ್ 30ರ ವರೆಗೂ ಮಧ್ಯಾಹ್ನದ ಬಿಸಿಯೂಟ ಇರುವುದಿಲ್ಲ. ನವೆಂಬರ್ 2 ರಿಂದ ಶಾಲೆಗಳಲ್ಲಿ ಬಿಸಿಯೂಟದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದೆ.
ಇನ್ನು ಎಲ್ಲಾ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಕೊಠಡಿಯಲ್ಲಿ 15 ರಿಂದ 20 ಮಕ್ಕಳ ತಂಡ ರಚಿಸಿ ಪಾಠ ಮಾಡಬೇಕು. ಶಾಲೆಯಲ್ಲಿ ಮಕ್ಕಳಿಗೆ ತಪಾಸಣೆ ನಡೆಸಬೇಕು ಎಂದು ಹೇಳಿದೆ.
ಮಕ್ಕಳಿಗೆ ಗೇಟ್ ಬಳಿ ಕೊರೊನಾ ತಪಾಸಣೆ ನಡೆಸಬೇಕು. ಕೊರೊನಾ ಕಂಡು ಬಂದರೆ ಶಾಲೆ ಸ್ಯಾನಿಟೈಸ್ ಮಾಡಬೇಕು. ಮುಂದಿನ ಆದೇಶದವರೆಗೆ ಎಲ್ಕೆಜಿ-ಯುಕೆಜಿ ಆರಂಭಿಸುವಂತಿಲ್ಲ.ಶಿಕ್ಷಕರು, ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದಿದೆ.