ಕಲಬುರ್ಗಿ, ಅ.21 (DaijiworldNews/PY): "ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹತಾಶೆ ಹಾಗೂ ಪ್ರಚಾರ ಗೀಳಿನ ಕಾರಣದಿಂದ ಕಾಂಗ್ರೆಸ್ ನಾಯಕರ ಮೇಲೆ ವೈಯುಕ್ತಿಕವಾಗಿ ದಾಳಿ ನಡೆಸುತ್ತಿದ್ದಾರೆ" ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರ್ಗಿ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ನಳಿನ್ ಕುಮಾರ್ ಕಟೀಲ್ ಅವರನ್ನು ಓವರ್ ಶಾಡೋ ಮಾಡಿದ್ದಾರೆ. ಈ ಕಾರಣದಿಂದ ಪಕ್ಷದಲ್ಲಿ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ನಳಿನ್ ಕುಮಾರ್ ಅವರಿಗೆ ಹೆಚ್ಚು ಪ್ರಚಾರ ನೀಡುತ್ತಿಲ್ಲ. ಹಾಗಾಗಿ ಪ್ರಚಾರ ಹಂಬಲದ ಕಾರಣ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಡ್ರಗ್ ಪೆಡ್ಲರ್ ಎಂದು ಹೇಳಿದ್ದಾರೆ" ಎಂದಿದ್ದಾರೆ.
"ವ್ಯಕ್ತಿಯೋರ್ವ ಹತಾಶನಾದಾಗ ಏನೇನೋ ಮಾತನಾಡಲು ಆರಂಭಿಸುತ್ತಾನೆ. ಈ ವೇಳೆ ದಾರಿ ತಪ್ಪುವುದು ಸಹಜ. ಕೆಲವೊಂದು ಬಾರಿ ತೀವ್ರ ಹತಾಶೆಯಾದಾಗ ಮದ್ಯಪಾನ ಮಾಡುತ್ತಾರೆ ಅಥವಾ ಡ್ರಗ್ ಕೂಡಾ ತೆಗೆದುಕೊಳ್ಳುತ್ತಾರೆ. ಬಹುಶಃ ಕಟೀಲ್ ಅವರು ಆ ಹಮತ ತಲುಪಿಲ್ಲ ಎಂದು ಭಾವಿಸುತ್ತೇನೆ. ಆದರೆ, ಕೆಲವೊಂದು ಬಾರಿ ಅವರು ಮಾತನಾಡುವುದನ್ನು ಕಂಡರೆ" ಅನುವಾನ ವ್ಯಕ್ತವಾಗುತ್ತದೆ ಎಂದು ಹೇಳಿದ್ದಾರೆ.
"ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಡ್ರಗ್ಸ್ ದಂಧೆ ಹೆಚ್ಚಾಗುತ್ತಿದೆ. ಮಣಿಪುರ, ಮಧ್ಯಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ, ಗುಜರಾತ್, ಮಧ್ಯಪ್ರದೇಶ ಹಾಗೂ ಪಂಜಾಬ್ನಲ್ಲಿ ಡ್ರಗ್ಸ್ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಆದರೆ, ಕೇಂದ್ರ ಸರ್ಕಾರ ಆರೋಪಿಗಳ ರಕ್ಷಣೆಗೆ ಮುಂದಾಗಿತ್ತು. ಈ ಬಗ್ಗೆ ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಅವರೆ ಹೇಳಿಕೆ ನೀಡಿದ್ದರು. ಆದರೆ, ಈ ದಂಧೆಯನ್ನು ತಡೆಯಲು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಫಲರಾಗಿದ್ದಾರೆ" ಎಂದಿದ್ದಾರೆ.