ಬೆಂಗಳೂರು, ಅ.21 (DaijiworldNews/PY): "ಮತದಾರರ ಮನಸ್ಸನ್ನು ಹಣದ ಮೂಲಕ ಭ್ರಷ್ಟಗೊಳಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದ್ದೇ ಕಾಂಗ್ರೆಸ್" ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಬಿಜೆಪಿ ನೋಟು, ಕಾಂಗ್ರೆಸ್ಗೆ ವೋಟುʼ ಎಂಬ ಘೋಷಣೆಯ ಮೂಲಕ ಡಿ ಕೆ ಶಿವಕುಮಾರ್ ಅವರು ಜನತೆಗೆ ಯಾವ ಸಂದೇಶ ನೀಡಲು ಹೊರಟಿದ್ದಾರೆ? ಈ ಹಿಂದೆ ನೀವು ಚಾಮರಾಜನಗರ, ಗುಂಡ್ಲುಪೇಟೆ ಉಪಚುನಾವಣೆಗಳನ್ನು ನೋಟು ಹಂಚಿಕೆ ಮಾಡಿ ಗೆದ್ದಿದ್ದೇ? ಮತದಾರರ ಮನಸ್ಸನ್ನು ಹಣದ ಮೂಲಕ ಭ್ರಷ್ಟಗೊಳಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದ್ದೇ ಕಾಂಗ್ರೆಸ್ ಎಂದಿದೆ.
"ಮಾನ್ಯ ಡಿ ಕೆ ಶಿವಕುಮಾರ್ ಅವರೇ, ಅದು ಯಾಕೆ ಆಯ್ತು, ಇದು ಯಾಕೆ ಆಯ್ತು ಎಂದು ಬೊಬ್ಬೆ ಹೊಡೆದು ದೇಹಕ್ಕೆ ಆಯಾಸ ಮಾಡಿಕೊಳ್ಳಬೇಡಿ. ನೀವು ಸಂಪಾದನೆ ಮಾಡಿದ ಕಪ್ಪು ಹಣವೆಷ್ಟು? ನಿಮ್ಮ ಬಂಧನ ಹಾಗೂ ತಿಹಾರ್ ಜೈಲು ಯಾತ್ರೆಯ ಹಿನ್ನೆಲೆ ಏನು?" ಎಂದು ಪ್ರಶ್ನಿಸಿದೆ.
ಮಾನ್ಯ ಹೆಚ್ ಡಿ ಕುಮಾರಸ್ವಾಮಿ ಅವರೇ, ನೀವು ಈ ಶತಮಾನ ಕಂಡ ರಾಜಕೀಯ ದಾರ್ಶನಿಕರು. ನನ್ನ ಬದುಕು ತೆರೆದ ಪುಸ್ತಕ, ಎಲ್ಲವನ್ನೂ ಒಪ್ಪಿಕೊಂಡಿದ್ದೇನೆ ಎಂಬ ನಿಮ್ಮ ಧೈರ್ಯ ಅಭಿನಂದನೀಯ. ಆದರೆ ಕಾನೂನು ಪ್ರಕಾರ "ಪಾರದರ್ಶಕ ಕಾಯ್ದೆ" ಉಲ್ಲಂಘನೆಯೂ ಅಪರಾಧವಲ್ಲವೇ? ತೆರೆದ ಪುಸ್ತಕ, ತೆರೆದ ಬಾವಿಯಷ್ಟೇ ಅಪಾಯವಂತೆ!!! ಎಂದು ಹೇಳಿದೆ.